ಕೊರೋನ ವೈರಸ್ ಭೀತಿ: ವಿಧಾನಸೌಧ-ಹೈಕೋರ್ಟ್ ಪ್ರವೇಶ ದ್ವಾರದ ಬಳಿ ತಪಾಸಣೆ
ಬೆಂಗಳೂರು, ಮಾ.15: ಕೊರೋನ ವೈರಸ್ ಕುರಿತು ಸರಕಾರಿ ಕಚೇರಿಯ ಸಿಬ್ಬಂದಿ ಹಾಗೂ ಕಚೇರಿಗಳಿಗೆ ಭೇಟಿ ನೀಡುವ ಸಾರ್ವಜನಿಕರನ್ನು ತಪಾಸಣೆ ಗೊಳಪಡಿಸಲು ಆರೋಗ್ಯ ಇಲಾಖೆಯ ಆಯುಕ್ತಾಲಯ ನಿರ್ಧರಿಸಿದೆ.
ವಿಧಾನಸೌಧ, ಬೆಂಗಳೂರಿನ ಹೈಕೋರ್ಟ್, ಗುಲ್ಬರ್ಗ ಹಾಗೂ ಧಾರವಾಡದಲ್ಲಿರುವ ಹೈಕೋರ್ಟ್ ಪೀಠ, ವಿಕಾಸ ಸೌಧ, ಎಂ.ಎಸ್.ಬಿಲ್ಡಿಂಗ್, ಶಾಸಕರ ಭವನ ಹಾಗೂ ಸಿಟಿ ಸಿವಿಲ್ ಕೋರ್ಟ್ ಪ್ರವೇಶ ದ್ವಾರಗಳ ಬಳಿ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ.
ಈ ಮೇಲ್ಕಂಡ ಪ್ರಮುಖ ಸ್ಥಳಗಳಲ್ಲಿ ತಪಾಸಣೆ ನಡೆಸಲು ಅಗತ್ಯವಿರುವ ಥರ್ಮಲ್ ಸ್ಕ್ಯಾನರ್, ಮಾಸ್ಕ್‌ಗಳನ್ನು ಒದಗಿಸುವಂತೆ ಡಿಎಚ್ ಹಾಗೂ ಎಫ್‌ಡಬ್ಯುಓಗಳಿಗೆ ಸೂಚಿಸಲಾಗಿದೆ. ತಪಾಸಣಾ ಕಾರ್ಯಕ್ಕೆ ಅಗತ್ಯವಿರುವ ಸ್ಟಾಫ್ ನರ್ಸ್‌ಗಳು ಲಭ್ಯವಿಲ್ಲದಿದ್ದರೆ, ಇತರ ಪ್ರಾಥಮಿಕ ಆರೋಗ್ಯ ಕೇಂದ್ರ, ಆಸ್ಪತ್ರೆಗಳು, ಸರಕಾರಿ ನರ್ಸಿಂಗ್ ಶಾಲೆಯಲ್ಲಿ ತರಬೇತಿ ಪಡೆಯುತ್ತಿರುವವರನ್ನು ಬಳಸಿಕೊಳ್ಳಬಹುದು.
108 ಆಂಬ್ಯುಲೆನ್ಸ್‌ಗಳನ್ನು ತಪಾಸಣೆಯ ಸ್ಥಳಗಳಲ್ಲಿ ಇರಿಸಿಕೊಳ್ಳಬೇಕು. ಜ್ವರದ ಪ್ರಕರಣಗಳು ಕಂಡು ಬಂದರೆ ಕೂಡಲೆ ಅವರನ್ನು ಸಮೀಪದ ಸರಕಾರಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ, ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಬೇಕು. ಇದಕ್ಕಾಗಿ ಹೈಕೋರ್ಟ್, ವಿಧಾನಸೌಧ, ಸಿಟಿ ಸಿವಿಲ್ ಕೋರ್ಟ್ ಹಾಗೂ ಶಾಸಕರ ಭವನದಲ್ಲಿ ಡಿಸ್ಪೆನ್ಸರಿಗಳು ಕಾರ್ಯನಿರ್ವಹಿಸಲು ಅಗತ್ಯ ಹೆಚ್ಚುವರಿ ಸಿಬ್ಬಂದಿಗಳನ್ನು ಒದಗಿಸಬೇಕು.
ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ತಪಾಸಣೆ ನಡೆಯಲಿದೆ. ಪ್ರತಿಯೊಂದು ತಪಾಸಣಾ ಸ್ಥಳದಲ್ಲಿ ಇಬ್ಬರು ಸ್ಟಾಫ್ ನರ್ಸ್ ಇರಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್‌ಕುಮಾರ್ ಪಾಂಡೆ ಆದೇಶ ಹೊರಡಿಸಿದ್ದಾರೆ.







