ಕೊರೋನ ವೈರಸ್ ತಡೆಗೆ ಖಾಸಗಿ ವೈದ್ಯರು ಸಹಕರಿಸಿರಿ: ಕಲಬುರಗಿ ಜಿಲ್ಲಾಧಿಕಾರಿ ಶರತ್
ಕಲಬುರಗಿ, ಮಾ.15: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯರು ಜಿಲ್ಲಾಡಳಿತ ಜೊತೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಶರತ್ ಕೋರಿದ್ದಾರೆ.
ರವಿವಾರ ನಗರದ ಪಂಡಿತ್ ರಂಗಮಂದಿರದಲ್ಲಿ ಭಾರತೀಯ ವೈದ್ಯಕೀಯ ಮಂಡಳಿ (ಐಎಂಎ) ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಖಾಸಗಿ ವೈದ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ಯಾವುದೇ ರೋಗಿಯನ್ನು ಉಪಚರಿಸಬೇಕು. ಒಂದು ವೇಳೆ ಕೆಮ್ಮು, ಜ್ವರ, ಶೀತ, ಉಸಿರಾಟದ ಸಮಸ್ಯೆ ಇದ್ದು, ಶಂಕಿತ ಕೊರೋನಾ ವೈರಸ್ ಲಕ್ಷಣಗಳಿದ್ದಲ್ಲಿ ಮಾತ್ರ ಸಹಾಯವಾಣಿ -1047ಕ್ಕೆ ಕರೆ ಮಾಡಬೇಕು ಎಂದು ಶರತ್ ಹೇಳಿದರು.
ಆನಂತರ, ಆರೋಗ್ಯ ಇಲಾಖೆಯ ಸಿಬ್ಬಂದಿ ಬಂದು ರೋಗಿಗಳನ್ನು ಕರೆದೊಯ್ಯಲಿದ್ದಾರೆ. ಬಳಿಕ ಅವರಿಗೆ ಕಲಬುರಗಿ ನಗರದ ಜಿಮ್ಸ್ ಮತ್ತು ಇಎಸ್‌ಐಸಿಯ ಕ್ವಾರಾಂಟೀನ್ ಹಾಗೂ ಐಸೋಲೇಷನ್ ವಾರ್ಡ್‌ಗಳಲ್ಲಿ ದಾಖಲಿಸಿ, ನಿಗಾವಹಿಸಲಾಗುವುದು ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ವಿಭಾಗೀಯ ಸರ್ವೇಕ್ಷಣಾಧಿಕಾರಿ (ಎಸ್‌ಎಮ್ಓ) ಅನಿಲ್ ತಾಳಿಕೋಟೆ, ಕೊರೋನ ವೈರಸ್ ಹೇಗೆ ಹರಡುತ್ತದೆ ಎಂಬ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ, ವೈರಸ್ ಹರಡುವುದನ್ನು ತಡೆಯಲು ಜಿಲ್ಲಾ ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮಗಳು, ಐಸೋಲೇಷನ್ ಹಾಗೂ ಕ್ವಾರಾಂಟೀನ್ ವಾರ್ಡ್‌ಗಳ ಸ್ಥಾಪನೆ, ಅರಿವು ಕಾರ್ಯಕ್ರಮಗಳು ಮುಂತಾದವುಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಕಲಬುರಗಿ ಸಂಸದ ಡಾ.ಉಮೇಶ್ ಜಾಧವ್, ಶಾಸಕರಾದ ಕನೀಝ್ ಫಾತಿಮಾ, ದತ್ತಾತ್ರೇಯ ಪಾಟೀಲ್ ರೇವೂರ, ಅವಿನಾಶ್ ಜಾಧವ್, ಭಾರತೀಯ ವೈದ್ಯಕೀಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ.ಅಮೋಲ್ ಪತಂಗೆ, ಆರೋಗ್ಯ ಇಲಾಖೆಯ ಕೋವಿದ್-19 ನೋಡಲ್ ಅಧಿಕಾರಿ ಡಾ.ಸಜ್ಜನ್ ಶೆಟ್ಟಿ, ಜಂಟಿ ನಿರ್ದೇಶಕ ಶಿವಾನಂದ.ಬಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಬ್ಬಾರ್ ಸೇರಿದಂತೆ ವಿವಿಧ ಖಾಸಗಿ ಆಸ್ಪತ್ರೆಯ ಹಿರಿಯ ವೈದ್ಯರು ಭಾಗವಹಿಸಿದ್ದರು.







