ಕೊರೋನ ಭೀತಿ: ಉಡುಪಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಡೆತ

ಉಡುಪಿ, ಮಾ.15: ಜಗತ್ತಿನಾದ್ಯಂತ ಆವರಿಸಿರುವ ಕೊರೋನ ಭೀತಿ ಯಿಂದಾಗಿ ಪ್ರವಾಸೋದ್ಯಮದ ಮೇಲೆ ಬಹಳ ದೊಡ್ಡ ಹೊಡೆತ ಬಿದ್ದಿದ್ದು, ಉಡುಪಿ ಜಿಲ್ಲೆಯ ಪ್ರಮುಖ ಪ್ರವಾಸೋದ್ಯಮ ತಾಣಗಳಲ್ಲಿ ಪ್ರವಾಸಿಗರ ಸಂಖ್ಯೆ ಸರಾಸರಿ ಶೇ.50ರಷ್ಟು ಕುಸಿದಿರುವುದು ಕಂಡುಬಂದಿದೆ.
ಕಳೆದ 10-15 ದಿನಗಳಿಂದ ಜಿಲ್ಲೆಗೆ ಆಗಮಿಸುತ್ತಿರುವ ಹೊರ ದೇಶ ಮತ್ತು ರಾಜ್ಯಗಳ ಪ್ರವಾಸಿಗರ ಸಂಖ್ಯೆಯಲ್ಲಿ ಬಹಳಷ್ಟು ಇಳಿಮುಖವಾಗಿದ್ದು, ಇದರ ಕರಿಛಾಯೆ ವಾರಾಂತ್ಯವಾಗಿರುವ ಶನಿವಾರ ಮತ್ತು ರವಿವಾರ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಗೋಚರಿಸಿದೆ. ಅದೇ ರೀತಿ ಇದರ ಬಿಸಿ ಇಲ್ಲಿನ ವ್ಯಾಪಾರದ ಮೇಲೂ ತಟ್ಟಿದೆ.
ಸದಾ ಪ್ರವಾಸಿಗರಿಂದ ತುಂಬಿರುವ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಕಳೆದ ಮೂರು ದಿನಗಳಿಂದ ಪ್ರವಾಸಿಗರ ಸಂಖ್ಯೆ ಸಾಕಷ್ಟು ಕಡಿಮೆ ಯಾಗಿದ್ದು, ಸೈಂಟ್ ಮೇರಿಸ್‌ಗೆ ತೆರಳುವ ಟೂರಿಸ್ಟ್ ಬೋಟುಗಳಿಗೆ ಪ್ರವಾಸಿಗರೇ ಇಲ್ಲ ಎಂಬ ಕೂಗು ಬೋಟಿನ ಮಾಲಕರಿಂದ ಕೇಳಿಬರುತ್ತಿವೆ.
ರಾಜ್ಯ ಸರಕಾರ ಕೊರೋನ ವೈರಸ್ ಭೀತಿಯಿಂದ ರಾಜ್ಯದಲ್ಲಿ ತುರ್ತು ಸ್ಥಿತಿ ಘೋಷಿಸಿದ ಶುಕ್ರವಾರದಿಂದ ಸೈಂಟ್ ಮೇರಿಸ್ ದ್ವೀಪಕ್ಕೆ ಕೇವಲ ಒಂದು ಟ್ರಿಪ್ ಮಾತ್ರ ಬೋಟುಗಳು ತೆರಳಿವೆ. ಅದರಲ್ಲಿಯೂ ಜನ ಭರ್ತಿಯಾಗಿಲ್ಲ. ಸಾಮಾನ್ಯವಾಗಿ ಪ್ರತಿದಿನ ಸೈಂಟ್ ಮೇರಿಸ್‌ಗೆ 6-7ಟ್ರಿಪ್‌ಗಳನ್ನು ಮಾಡ ಲಾಗುತ್ತದೆ. ಒಂದು ಟ್ರಿಪ್‌ನಲ್ಲಿ ಸುಮಾರು 30-40 ಮಂದಿ ತೆರಳುತ್ತಾರೆ ಎನ್ನುತ್ತಾರೆ ಟೂರಿಸ್ಟ್ ಬೋಟಿನ ಮಾಲಕ ಗಣೇಶ್ ಅಮೀನ್.
‘ಕೊರೋನ ಭೀತಿಯಿಂದ ಮಲ್ಪೆ ಬೀಚ್ ಹಾಗೂ ಸೈಂಟ್ ಮೇರಿಸ್ ದ್ವೀಪದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವುದು ಕಂಡುಬಂದಿದೆ. ರವಿವಾರ ಮಲ್ಪೆ ಬೀಚ್‌ನಲ್ಲಿ ಶೇ.30ರಷ್ಟು ಹಾಗೂ ಸೈಂಟ್ ಮೇರಿಸ್ ದ್ವೀಪ ದಲ್ಲಿ ಶೇ.60ರಷ್ಟು ಪ್ರವಾಸಿಗರ ಸಂಖ್ಯೆ ಇಳಿಕೆಯಾಗಿದೆ. ಇದರಿಂದ ಬೀಚ್ ನಲ್ಲಿರುವ ವ್ಯಾಪರಸ್ಥರಿಗೂ ದೊಡ್ಡ ಹೊಡೆತ ಬಿದ್ದಿದೆ’ ಎಂದು ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿಯ ಸುದೇಶ್ ಶೆಟ್ಟಿ ತಿಳಿಸಿದರು.
ಅದೇ ರೀತಿ ಜಿಲ್ಲೆಯ ಪ್ರಮುಖ ದೇವಳಗಳಾದ ಉಡುಪಿ ಶ್ರೀಕೃಷ್ಣಮಠ ಹಾಗೂ ಕೊಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿಯೂ ಭಕ್ತರ ಸಂಖ್ಯೆ ಇಳಿಕೆ ಕಂಡುಬಂದಿದೆ. ಈಗಾಗಲೇ ಕೊಲ್ಲೂರು ದೇವಸ್ಥಾನದವರು ಪ್ರಕಟಣೆ ಮೂಲಕ ದೇವಳಕ್ಕೆ ಆಗಮಿಸದಂತೆ ಮನವಿ ಮಾಡಿ ಕೊಂಡಿದ್ದಾರೆ. ಕೊಲ್ಲೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಕೇರಳದ ಭಕ್ತರು ಕಳೆದ 10 ದಿನಗಳಿಂದ ಕಡಿಮೆ ಆಗಿದ್ದಾರೆ. ಇಡೀ ಜಗತ್ತಿನಲ್ಲಿ ರೋಗ ಭೀತಿ ವ್ಯಾಪಿಸಿರುವುದರಿಂದ ಜಿಲ್ಲೆಯಲ್ಲಿ ವಿದೇಶಿ ಪ್ರವಾಸಿಗರು ಕೂಡ ಕಡಿಮೆಯಾಗಿದ್ದಾರೆ.
ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವ ಬಗ್ಗೆ ನಿಖರವಾದ ಅಂಕಿ ಅಂಶಗಳು ದೊರೆಯುತ್ತಿಲ್ಲ. ಆದರೆ ಕೊರೋನ ಭೀತಿಯಲ್ಲಿ ಸಾಕಷ್ಟು ಸಂಖ್ಯೆ ಯಲ್ಲಿ ಪ್ರವಾಸಿಗರು ಕಡಿಮೆಯಾಗಿರುವು ಮೇಲ್ನೋಟಕ್ಕೆ ಕಂಡುಬಂದಿದೆ. ಇದರಿಂದ ಜಿಲ್ಲೆಯ ವ್ಯಾಪಾರಕ್ಕೂ ಇಲಾಖೆಗೂ ನಷ್ಟವಾಗಲಿದೆ. ಈಗಾಗಲೇ ಭಾರತ ಸರಕಾರ ಕಟ್ಟೆಚ್ಚರ ವಹಿಸಿರುವುದರಿಂದ ವಿದೇಶಿ ಪ್ರವಾಸಿಗರು ಕೂಡ ಇಲ್ಲಿಗೆ ಬರುತ್ತಿಲ್ಲ.
-ಚಂದ್ರಶೇಖರ್ ನಾಯ್ಕ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಉಡುಪಿ ಜಿಲ್ಲೆ









