ಇರಾನ್‌ನಿಂದ ಆಗಮಿಸಿದ 230 ಭಾರತೀಯರು ಜೈಸಲ್ಮಾರ್‌ನ ಪ್ರತ್ಯೇಕ ಶಿಬಿರಕ್ಕೆ

ಜೈಸಲ್ಮಾರ್: ಕೊರೋನ ಪೀಡಿತ ಇರಾನ್‌ನಿಂದ 230 ಭಾರತೀಯರನ್ನು ಒಳಗೊಂಡ ಎರಡು ಏರ್ ಇಂಡಿಯಾ ವಿಮಾನ ರವಿವಾರ ಬೆಳಗ್ಗೆ ಭಾರತದಲ್ಲಿ ಇಳಿದಿದೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಜೈಸಲ್ಮಾರ್‌ನಲ್ಲಿರುವ ಭಾರತೀಯ ಸೇನೆಯ ಕ್ಷೇಮ ಕೇಂದ್ರದ ಪ್ರತ್ಯೇಕ ಶಿಬಿರಕ್ಕೆ ಕರೆದೊಯ್ಯಲಾಗಿದೆ.
ಇರಾನ್‌ನಿಂದ ಒಟ್ಟು 234 ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ತಿಳಿಸಿದ್ದಾರೆ. ಆದರೆ, 236 ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ರಕ್ಷಣಾ ವಕ್ತಾರ ಕರ್ನಲ್ ಸೊಂಬಿತ್ ಘೋಶ್ ತಿಳಿಸಿದ್ದಾರೆ.
‘‘ಇರಾನ್‌ನಲ್ಲಿ ಸಿಲುಕಿಕೊಂಡ 234 ಭಾರತೀಯರು ಭಾರತಕ್ಕೆ ಆಗಮಿಸಿದ್ದಾರೆ. ಅವರಲ್ಲಿ 103 ಯಾತ್ರಿಗಳು ಹಾಗೂ 131 ವಿದ್ಯಾರ್ಥಿಗಳು ಸೇರಿದ್ದಾರೆ. ಇರಾನ್‌ನ ರಾಯಭಾರಿ ಅವರ ಪ್ರಯತ್ನಕ್ಕೆ ಕೃತಜ್ಞತೆ. ಇರಾನ್ ಅಧಿಕಾರಿಗಳಿಗೆ ಕೃತಜ್ಞತೆ’’ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.
218 ಭಾರತೀಯರು ಇಟಲಿಯಿಂದ ಭಾರತಕ್ಕೆ
ಕೊರೋನ ವೈರಾಣು ಪೀಡಿತ ಇಟಲಿಯಲ್ಲಿ ಸಿಲುಕಿಕೊಂಡಿದ್ದ 211 ವಿದ್ಯಾರ್ಥಿಗಳ ಸಹಿತ ಒಟ್ಟು 218 ಭಾರತೀಯರು ಭಾರತಕ್ಕೆ ಆಗಮಿಸಿದ್ದಾರೆ. ಅವರನ್ನು 14 ದಿನಗಳ ಕಾಲ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಹಾಯಕ ಸಚಿವ ವಿ. ಮುರಳೀಧರನ್ ತಿಳಿಸಿದ್ದಾರೆ.







