ಜಗತ್ತಿನ ಹೃದಯ ಕಲಕಿದ ಸಿರಿಯದ ಮಗುವಿನ ಜಲ ಸಮಾಧಿ: ಮೂವರಿಗೆ 125 ವರ್ಷ ಜೈಲು

ಅಂಕಾರ (ಟರ್ಕಿ), ಮಾ. 15: ಸಿರಿಯದ ಮಗು ಅಯ್ಲನ್ ಕುರ್ದಿಯ ಸಾವಿಗೆ ಸಂಬಂಧಿಸಿದ ಪ್ರಕರಣದಲ್ಲಿ, ಮಾನವ ಕಳ್ಳಸಾಗಾಣಿಕೆ ಜಾಲದ ಸಂಘಟಕರೆಂದು ಭಾವಿಸಲಾದ ಮೂವರಿಗೆ ಟರ್ಕಿಯ ನ್ಯಾಯಾಲಯವೊಂದು ಶುಕ್ರವಾರ ತಲಾ 125 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಮೂರು ವರ್ಷದ ಅಯ್ಲನ್‌ನ ನಿರ್ಜೀವ ದೇಹವು ಟರ್ಕಿಯ ಸಮುದ್ರ ದಂಡೆಯಲ್ಲಿ ತೇಲುತ್ತಿರುವ ಚಿತ್ರವು 2015ರಲ್ಲಿ ಮನುಕುಲದ ಹೃದಯ ಕಲುಕಿತ್ತು. ಅದು ಸಿರಿಯ ನಿರಾಶ್ರಿತ ಬಿಕ್ಕಟ್ಟನ್ನು ಬಿಂಬಿಸುವ ಪ್ರಭಾವಶಾಲಿ ಚಿತ್ರವಾಗಿತ್ತು.
ಆರೋಪಿಗಳು ‘ಗೊತ್ತಿದ್ದೇ ಈ ಕೃತ್ಯದಲ್ಲಿ ತೊಡಗಿದ್ದಾರೆ’ ಎಂದು ಘೋಷಿಸಿದ ಮುಗ್ಲದಲ್ಲಿರುವ ಬೋಡ್ರಮ್ ಹೈ ಕ್ರಿಮಿನಲ್ ನ್ಯಾಯಾಲಯವು, ಅವರನ್ನು ದೋಷಿಗಳು ಎಂದು ಘೋಷಿಸಿತು.
ಕಾನೂನಿನಿಂದ ತಪ್ಪಿಸಿಕೊಂಡಿದ್ದ ಆರೋಪಿಗಳನ್ನು ಟರ್ಕಿ ಭದ್ರತಾ ಪಡೆಗಳು ಈ ವಾರ ದಕ್ಷಿಣದ ರಾಜ್ಯ ಅದಾನದಲ್ಲಿ ಸೆರೆಹಿಡಿದಿದ್ದವು ಎಂದು ಸರಕಾರಿ ಸುದ್ದಿ ಸಂಸ್ಥೆ ‘ಅನದೊಲು’ ವರದಿ ಮಾಡಿದೆ.
ಸಿರಿಯ ಮತ್ತು ಟರ್ಕಿಯ ಹಲವಾರು ಮಾನವ ಕಳ್ಳಸಾಗಾಣಿಕೆದಾರರನ್ನು ಈ ಪ್ರಕರಣದ ಆರೋಪಿಗಳೆಂದು ಹೆಸರಿಸಲಾಗಿತ್ತು ಹಾಗೂ ಅವರಿಗೆ ಜೈಲು ಶಿಕ್ಷೆಗಳನ್ನು ವಿಧಿಸಲಾಗಿತ್ತು. ಈ ಮೂವರು ಆರೋಪಿಗಳು ಪ್ರಕರಣದ ವಿಚಾರಣೆಯ ವೇಳೆ ತಪ್ಪಿಸಿಕೊಂಡಿದ್ದರು.
2015 ಸೆಪ್ಟಂಬರ್ 2ರಂದು ಸಂಘರ್ಷಪೀಡಿತ ಸಿರಿಯದಿಂದ ತಪ್ಪಿಸಿಕೊಂಡು ಹೊಸ ಬದುಕನ್ನು ಅರಸುತ್ತಾ ಮೆಡಿಟರೇನಿಯನ್ ಸಮುದ್ರದ ಮೂಲಕ ಗ್ರೀಕ್ ದ್ವೀಪಗಳಿಗೆ ದೋಣಿಯೊಂದರಲ್ಲಿ ಹೊರಟ 14 ಸಿರಿಯನ್ನರಲ್ಲಿ 3 ವರ್ಷದ ಅಯ್ಲಾನ್ ಕೂಡ ಇದ್ದನು.







