ಕುರ್ನಾಡು: ಲಯನ್ಸ್ ಕ್ಲಬ್ ನಿಂದ ಎಂಟು ಕುಟುಂಬಗಳಿಗೆ 'ಲಯನ್ಸ್ ಆಶ್ರಯ'ಮನೆಗಳ ಹಸ್ತಾಂತರ

ಕೊಣಾಜೆ : ಬಡವರಿಗೆ ಸೂರು ಕಲ್ಪಿಸುವುದು ಪುಣ್ಯದ ಕೆಲಸ. ಲಯನ್ ದೇವದಾಸ್ ಭಂಡಾರಿಯವರು ಲಯನ್ಸ್ ಕ್ಲಬ್ ಸಹಕಾರೊಂದಿಗೆ ಸಮಾಜ ಸೇವಾ ಮನೋಭಾವದೊಂದಿಗೆ ಬಡವರಿಗೆ ಸೂರು ಕಲ್ಪಿಸಿ ಕೊಟ್ಟು ತಮ್ಮ ಕನಸನ್ನು ನನಸಾಗಿಸಿದ್ದಾರೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಎನ್.ಶಾಂತರಾಮ ಶೆಟ್ಟಿ ಹೇಳಿದರು.
ಅವರು ರವಿವಾರ ಕುರ್ನಾಡು ಗ್ರಾಮದಲ್ಲಿ ಲಯನ್ಸ್ ಜಿಲ್ಲೆ 317 ಡಿ ಹಾಗೂ ಲಯನ್ಸ್ ಡಿಸ್ಟ್ರಿಕ್ಟ್ ಆಶ್ರಯ ಟ್ರಸ್ಟ್ ಇದರ ಆಶ್ರಯದಲ್ಲಿ `ಸೂರಿಲ್ಲದವರಿಗೆ ಸೂರು' ಯೋಜನೆಯಡಿ ನಿರ್ಮಾಣಗೊಂಡ ಎಂಟು ಮನೆಗಳನ್ನು ರವಿವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ನಾವು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದಾದರೆ ದೃಢ ಸಂಕಲ್ಪದೊಂದಿಗೆ ಬದ್ದತೆ, ಪ್ರಾಮಾಣಿಕತೆಯೂ ಅಗತ್ಯ. ಇಂತಹ ಅಮೂಲ್ಯ ಸೇವೆಯ ಮೂಲಕ ಭಂಡಾರಿಯವರು ಮಾದರಿ ಸೇವೆಯನ್ನು ಸಮಾಜಕ್ಕೆ ನೀಡಿದ್ದಾರೆ ಎಂದರು.
ಜಿಲ್ಲಾ ಗವರ್ನರ್ ರೊನಾಲ್ಡ್ ಗೋಮ್ಸ್ ಅವರು ಮಾತನಾಡಿ, ಸೂರಿಲ್ಲದವರಿಗೆ ಸೂರನ್ನು ಒದಗಿಸಿಕೊಡುವ ಪುಣ್ಯ ಕೆಲಸವನ್ನು ದೇವದಾಸ್ ಭಂಡಾರಿಯವರು ಮಾಡಿದ್ದಾರೆ ಎಂದರು.
ಶಾಸಕ ಯು.ಟಿ ಖಾದರ್, ಅನಿತಾ ಗೋಮ್ಸ್, ಲಯನ್ಸ್ ಉಪರಾಜ್ಯಪಾಲ ಡಾ.ಗೀತಾ ಪ್ರಕಾಶ್, ದ್ವಿತೀಯ ಉಪರಾಜ್ಯಪಾಲ ವಸಂತ್ ಕುಮಾರ್ ಶೆಟ್ಟಿ , ಬಾಲಕೃಷ್ಣ ಹೆಗ್ಡೆ, ಶ್ರೀನಾಥ್ ಕೊಂಡೆ, ರಾಧಾಕೃಷ್ಣ ರೈ ಉಮಿಯ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ, ಕುರ್ನಾಡು ಪಂಚಾಯತಿ ಅಧ್ಯಕ್ಷೆ ಶೈಲಜಾ ಮಿತ್ತಕೋಡಿ, ತಾಲೂಕು ಪಂ. ಸದಸ್ಯ ಶಿವಶಂಕರ್ ಭಟ್, ಡಾ. ಮಾಧವಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಂಟು ಫಲಾನುಭವಿ ಕುಟುಂಬಗಳಿಗೆ ಮನೆಯ ಕೀಲಿ ಕೈ ಹಸ್ತಾಂತರಿಸಲಾಯಿತು. 2018-19 ನೇ ಸಾಲಿನ ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್ ದೇವದಾಸ್ ಭಂಡಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಗವಾನ್ ದಾಸ್ ಕಾಜವ ಅವರು ಸ್ವಾಗತಿಸಿದರು. ವಿಜಯ ವಿಷ್ಣು ಮಯ್ಯ ನಿರೂಪಿಸಿದರು.
ತಮ್ಮ 12 ಸೆಂಟ್ಸ್ ಸ್ವಂತ ಜಾಗವನ್ನು ದಾನವಾಗಿ ನೀಡಿದ ಕುರ್ನಾಡು ಜಾಗದಲ್ಲಿ ಸುಸಜ್ಜಿತ ಎಂಟು ಮನೆಗಳ ನಿರ್ಮಾಣವಾಗಿದೆ. ರೂ.64 ಲಕ್ಷ ರೂ ಹಣದಲ್ಲಿ ಮನೆ ನಿರ್ಮಾಣವಾಗಿದೆ. ಧರ್ಮಸ್ಥಳ, ಹಾಸನ, ಸಕಲೇಶಪುರ ಹಾಗೂ ಸ್ಥಳೀಯ ಎಂಟು ಕುಟುಂಬಗಳನ್ನು ಕಂದಾಯ ಇಲಾಖೆಯ ತಹಶೀಲ್ದಾರ್ ಹಾಗೂ ಪಂಚಾಯತಿ ಶಿಫಾರಸ್ಸಿನ ಮೇರೆಗೆ ಹಕ್ಕುಪತ್ರ ಹಾಗೂ ಮನೆಗಳ ಕೀಲಿ ಕೈಯನ್ನು ನೀಡಲಾಗಿದೆ. ಆರ್ಥಿಕ ಸಂಕಷ್ಟ ಹಾಗೂ ಮನೆಗಳು ಇಲ್ಲದವರನ್ನೇ ಆಯ್ಕೆ ಮಾಡಿ ಮನೆ ನೀಡಲಾಗಿದೆ.
- ದೇವದಾಸ್ ಭಂಡಾರಿ, 2018-19 ನೇ ಸಾಲಿನ ಲಯನ್ಸ್ ಡಿಸ್ಟ್ರಿಕ್ಟ್ ಗವರ್ನರ್








