ದ.ಕ.ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ನಿರ್ಮಾಣಕ್ಕೆ ಅನುದಾನ ಕೊರತೆ: ಶಾಸಕ ಉಮನಾಥ ಕೋಟ್ಯಾಣ್
ಪಡೀಲ್‌ನಲ್ಲಿ ಕಾಮಗಾರಿ ಪರಿಶೀಲನೆ

ಮಂಗಳೂರು, ಮಾ.15: ನಗರದ ಪಡೀಲ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ದ.ಕ. ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಕಾಮಗಾರಿಗೆ ಅನುದಾನದ ಕೊರತೆ ಇದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಂಸದರು ಮತ್ತು ಶಾಸಕರ ಸೇರಿ ಸಭೆ ನಡೆಸಿ ಕಾಮಗಾರಿಗೆ ವೇಗ ನೀಡುವ ಸಲುವಾಗಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗುವುದು ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.
ಪಡೀಲ್‌ಗೆ ರವಿವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
2008ರಲ್ಲಿ 41 ಕೋ.ರೂ.ಅಂದಾಜು ವೆಚ್ಚದಲ್ಲಿ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿತ್ತು. ಈಗ ಅದರ ಮೊತ್ತ 55 ಕೋ.ರೂ.ವರೆಗೆ ತಲುಪಿದೆ. ಕಾಮಗಾರಿ ಮುಗಿಯುವ ವೇಳೆಗೆ ಈ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದರು.
ಕಟ್ಟಡ ರಚನೆಯು ಪೂರ್ಣಗೊಂಡಿದೆ. ಆದರೆ ಸಾರಣೆ, ನೆಲದ ಕಾಮಗಾರಿ, ಒಳಾಂಗಣ ವಿನ್ಯಾಸ ಸಹಿತ ತುಂಬಾ ಕೆಲಸಗಳು ಬಾಕಿ ಇವೆ. ಈಗಾಗಲೇ 32 ಕೋ.ರೂ. ಖರ್ಚಾಗಿದ್ದು, 24 ಕೋ.ರೂ. ಗುತ್ತಿಗೆದಾರರಿಗೆ ಪಾವತಿಸಲಾಗಿದೆ. ಕಟ್ಟಡದಲ್ಲಿ ಕಚೇರಿ ಹೊಂದಲಿರುವ ಪ್ರಮುಖ ಇಲಾಖೆಗಳಾದ ಆರೋಗ್ಯ ಇಲಾಖೆಯಿಂದ 7 ಕೋ.ರೂ., ಸಣ್ಣ ನೀರಾವರಿ ಇಲಾಖೆಯಿಂದ 1 ಕೋ.ರೂ. ಬರಲು ಬಾಕಿ ಇದೆ. ಹಳೆಯ ಡಿಸಿ ಕಚೇರಿಯನ್ನು ಸ್ಮಾರ್ಟ್ ಸಿಟಿಗೆ ನೀಡಲು ಉದ್ದೇಶಿಸಲಾಗಿದ್ದು, ಅವರಿಂದ 10 ಕೋ.ರೂ. ಪಡೆಯಲು ಉದ್ದೇಶಿಸಲಾಗಿದೆ ಎಂದು ಉಮನಾಥ ಕೋಟ್ಯಾನ್ ನುಡಿದರು.
ಈ ಸಂದಭ ಕಟ್ಟಡದ ಆರ್ಕಿಟೆಕ್ಟ್ ಧರ್ಮರಾಜ್, ಗುತ್ತಿಗೆದಾರ ಪ್ರಭಾಕರ ಯೆಯ್ಯಿಡಿ, ಸೈಟ್ ಇಂಜಿನಿಯರ್ ವಿಜಯ್ ಕುಮಾರ್, ಕರ್ನಾಟಕ ಹೌಸಿಂಗ್ ಬೋರ್ಡ್ ಇಂಜಿನಿಯರ್ ಸಹನಾ ಮತ್ತಿತರರಿದ್ದರು.
ಒಂದೇ ಕಟ್ಟಡದಲ್ಲಿ 38 ಇಲಾಖೆಗಳು!
5.8 ಎಕರೆ ಪ್ರದೇಶದಲ್ಲಿ 2.26 ಲಕ್ಷ ಚ.ಅಡಿ.ವಿಸ್ತೀರ್ಣದ ಡಿಸಿ ಕಚೇರಿ ನಿರ್ಮಾಣವಾಗಲಿದೆ. ಈ ಕಚೇರಿ ಸಂಕೀರ್ಣದಲ್ಲಿ 38 ವಿವಿಧ ಇಲಾಖೆಗಳು, ಜಿಲ್ಲಾ ಉಸ್ತುವಾರಿ ಸಚಿವ, ಸಂಸದ, ಶಾಸಕರ ಕಚೇರಿಯೂ ಇದರಲ್ಲಿ ತೆರೆಯಲಾಗುತ್ತದೆ. ಮುಂಭಾಗದಲ್ಲಿ ಹಾದು ಹೋಗುವ ರಸ್ತೆಯು ಹಿಂದೆ ಹೆದ್ದಾರಿಯಾಗಿತ್ತು. ಆಗ 45 ಮೀ. ಸೆಟ್‌ಬ್ಯಾಕ್ ಬಿಡಬೇಕಿತ್ತು. ಆದರೆ ಈಗ ಅದು ಪಾಲಿಕೆ ವ್ಯಾಪ್ತಿಯ ರಸ್ತೆಯಾಗಿರುವುದರಿಂದ 30 ಮೀ. ಮಾತ್ರ ಸೆಟ್‌ಬ್ಯಾಕ್ ಬಿಟ್ಟರೆ ಸಾಕಾಗುತ್ತದೆ. ಆದರೆ ಈ ಕುರಿತು ಅಂತಿಮ ತೀರ್ಮಾನವಾಗದಿರುವುದರಿಂದ ಆವರಣ ಗೋಡೆ ನಿರ್ಮಾಣಕ್ಕೆ ಸಮಸ್ಯೆಯಾಗಿದೆ ಎಂದು ಶಾಸಕ ಕೋಟ್ಯಾನ್ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಸಿದರು.








