ಕೊರೋನ ವೈರಸ್ ಭೀತಿ: ಮಂಗಳೂರಿನಲ್ಲಿ ಮೌನ !
► ಜನಜೀವನ ಅಸ್ತವ್ಯಸ್ತ ► ಬಿಕೋ ಎನ್ನುತ್ತಿವೆ ರಸ್ತೆಗಳು

ಮಂಗಳೂರು, ಮಾ.15: ವಿಶ್ವವನ್ನೇ ಆತಂಕದ ಕೂಪಕ್ಕೆ ತಳ್ಳಿರುವ ಕೊರೋನ ಸೋಂಕು ರಾಜ್ಯದಲ್ಲೂ ಭೀತಿಯನ್ನು ಹುಟ್ಟಿಸಿದೆ. ರಾಜ್ಯ ಸರಕಾರವು ಮುನ್ನೆಚ್ಚರಿಕೆ ಕ್ರಮವಾಗಿ ವಾರದ ರಜೆ ಘೋಷಿಸಿ ಎರಡು ದಿನ ಕಳೆದಿದ್ದು, ಮಂಗಳೂರಿನ ರಸ್ತೆಗಳು ರವಿವಾರ ಬಿಕೋ ಎತ್ತುತ್ತಿದ್ದವು. ಮಾಲ್, ಉದ್ಯಾನ, ಶಾಲೆ ... ಹೀಗೆ ಎಲ್ಲ ಬಹುತೇಕ ಮಂಗಳೂರಿನಲ್ಲಿ ಬಂದ್ ವಾತಾವರಣವಿದೆ.
ಶನಿವಾರದಂತೆಯೇ ರವಿವಾರವೂ ನಗರದ ಫೋರಮ್ ಫಿಝಾ ಮಾಲ್, ಸಿಟಿ ಸೆಂಟರ್, ಭಾರತ್ ಮಾಲ್‌ಗಳು, ಚಿತ್ರಮಂದಿರಗಳು ಬಂದ್ ಆಗಿದ್ದರಿಂದ ಅತ್ತ ಕಡೆ ಜನರ ಸುಳಿವೇ ಇರಲಿಲ್ಲ. ಕೊರೋನ ಭೀತಿಯಿಂದ ನಗರದಲ್ಲಿ ವ್ಯಾಪಾರ-ವಹಿವಾಟು ಕುಂಠಿತಗೊಂಡಿದೆ. ತರಕಾರಿ, ಹೂ-ಹಣ್ಣು ಹಂಪಲು, ಮೀನು, ಕೋಳಿ ಮಾಂಸ, ಮೊಟ್ಟೆ ಹೀಗೆ ದಿನನಿತ್ಯ ಬಳಕೆಯ ಸರಕಿನ ಬೆಲೆ ಕುಸಿಯುತ್ತಿದೆ. ವ್ಯಾಪಾರಸ್ಥರು ವಹಿವಾಟು ಇಲ್ಲದೆ ಸಪ್ಪೆ ಮೊರೆ ಹಾಕಿ ಕುಳಿತಿದ್ದರೆ, ಇತ್ತ ಬಂದ್ ಭೀತಿಯ ಭಾವನೆಯಲ್ಲಿ ಜನತೆ ವಿಶ್ರಾಂತಿ ಬಯಸಿರುವುದೂ ಇದಕ್ಕೆ ಪುಷ್ಠಿ ನೀಡುವಂತಿದೆ.
ಮಂಗಳೂರು ನಗರದ ರಸ್ತೆಗಳಲ್ಲಿ ಮಾಸ್ಕ್‌ಗಳ ಮುಸುಕುಧಾರಿಗಳ ಸಂಖ್ಯೆ ಹೆಚ್ಚಳಗೊಂಡಿದೆ. ಇದರಿಂದ ಶೀತ, ಕೆಮ್ಮು, ಜ್ವರದಿಂದ ಬಳಲುತ್ತಿರುವವರಿಗಿಂತ ಆರೋಗ್ಯವಂತರೇ ಹೆಚ್ಚಿನ ಪ್ರಮಾಣದಲ್ಲಿ ಮಾಸ್ಕ್‌ಗಳನ್ನು ಧರಿಸುತ್ತಿರುವುದು ಕೊರೋನದ ಭೀತಿ ವ್ಯಾಪಕವಾಗಿ ಹಬ್ಬುತ್ತಿರುವುದರ ಪ್ರತೀಕವಾಗಿದೆ.
ಬೀದಿಬದಿ ಹೊಟೇಲ್ ಬಂದ್: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬೀದಿಬದಿಯಲ್ಲಿ ವ್ಯಾಪಾರ ಮಾಡುವವರನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿದಿದೆ. ಬೀದಿಬದಿಯಲ್ಲಿ ತಿಂಡಿ-ತಿನಿಸು ಮಾರುವ ಹಾಗೂ ಫಾಸ್ಟ್‌ಫುಡ್ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಬೀದಿಯಲ್ಲಿ ಯಾವುದೇ ತೆರನಾದ ತಿಂಡಿ-ತಿನಿಸು ಮಾರಾಟ ಮಾಡದಂತೆ ಪಾಲಿಕೆ ಆಯುಕ್ತರು ಖಡಕ್ ಸೂಚನೆ ರವಾನಿಸಿದ್ದರು. ಆಯುಕ್ತರ ಸೂಚನೆಯ ಹೊರತಾಗಿಯೂ ಮಂಗಳೂರು ನಗರದ ಕೆಲವೆಡೆ ಶನಿವಾರ ರಾತ್ರಿ ವೇಳೆ ಬೀದಿಬದಿಯಲ್ಲಿ ತಿಂಡಿ-ತಿನಿಸುಗಳ ಅಂಗಡಿಗಳು ತೆರೆದಿದ್ದವು.
ಪ್ರಯಾಣಿಕರ ಸಂಖ್ಯೆ ಕಡಿಮೆ: ಕೊರೋನ ಹಿನ್ನೆಲೆಯಲ್ಲಿ ಬಂದ್ ವಾತಾವರಣ ಏರ್ಪಟ್ಟ ಬಳಿಕ ಸಾರ್ವಜನಿಕ ವಲಯದಲ್ಲಿ ಏಕತಾನತೆ ಕಾಡುತ್ತಿದೆ. ಮಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆಯಲ್ಲಿ ತೀರಾ ಕಡಿಮೆಯಾಗಿತ್ತು. ಮಧ್ಯಾಹ್ನವಂತೂ ರಸ್ತೆಯಲ್ಲಿ ವಾಹನಗಳ ಶಬ್ದವೇ ಕೇಳುತ್ತಿರಲಿಲ್ಲ ಎನ್ನುವಷ್ಟು ಸಂಚಾರ ವಿರಳವಾಗಿತ್ತು.
ಬಂದ್ ನಡುವೆ ರವಿವಾರವೂ ಬಂದದ್ದರಿಂದ ಎಲ್ಲರೂ ಮನೆಯಲ್ಲಿ ಕಾಲ ಕಳೆದರು. ಬಸ್‌ನಲ್ಲಿ ಸಂಚರಿಸುವವರ ಸಂಖ್ಯೆಯಲ್ಲಿ ಭಾರೀ ಇಳಿತ ಕಂಡಿತು. ಇನ್ನು ದ್ವಿಚಕ್ರ, ತ್ರಿಚಕ್ರ, ನಾಲ್ಕು ಚಕ್ರ ವಾಹನಗಳ ಓಡಾಟವಿದ್ದರೂ ಜನಜೀವನದಲ್ಲಿ ತೀರಾ ಅಸ್ತವ್ಯಸ್ತತೆ ಉಂಟಾಯಿತು. ಪ್ರತಿನಿತ್ಯದ ಟ್ರಾಫಿಕ್ ರವಿವಾರ ಇರಲಿಲ್ಲ ಎಂದರೂ ಸಂಜೆ ವೇಳೆ ಅಲ್ಪ ಪ್ರಮಾಣದಲ್ಲಿ ವಾಹನ-ಜನ ಸಂಚಾರ ಕಂಡುಬಂದಿತು.
ವಾಟ್ಸ್‌ಆ್ಯಪ್‌ನಲ್ಲಿ ಪೋಸ್ಟ್!: ರಾಜ್ಯ ಸರಕಾರವು ಶಾಲೆಗಳಿಗೆ ರಜೆ ಘೋಷಿಸಿದ ಬೆನ್ನಲ್ಲೇ ಶಾಲಾ ಮಕ್ಕಳು ರಜೆಯ ಮಜ ಅನುಭವಿಸುತ್ತಿದ್ದಾರೆ. ರಜೆ ಸಮಯದಲ್ಲಿ ಸಾಮಾನ್ಯವಾಗಿ ಮಕ್ಕಳು ಮನೆಯಲ್ಲಿ ಕುಳಿತುಕೊಳ್ಳದೇ ಆಟಕ್ಕೆಂದು ಮೈದಾನ-ಹೊರಭಾಗದಲ್ಲೇ ಹೆಚ್ಚು ಹೊತ್ತು ಉಳಿಯುವ ಅನೌಪಚಾರಿಕ ಪಾಠವಿತ್ತು. ಆದರೆ ಕೊರೋನ ಭೀತಿಯಿಂದ ಪೋಷಕರು ತಮ್ಮ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಿಕೊಡುತ್ತಿಲ್ಲ. ಟಿವಿ ನೋಡುತ್ತಾ ಮನೆಯಲ್ಲೇ ಆಟ ಆಡುತ್ತಿರುವ ದೃಶ್ಯಗಳ ವೀಡಿಯೊ, ಫೋಟೊಗಳನ್ನು ಪೋಷಕರು ತಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್, ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಂತಹ ಫೋಟೊ, ವೀಡಿಯೊಗಳಿಗೆ ‘ತ್ಯಾಂಕ್ಸ್ ಟು ಕೊರೋನ’ ಎಂಬ ಅಡಿ ಬರಹವನ್ನು ಕೊಟ್ಟು ಎಂಜಾಯ್ ಮಾಡುತ್ತಿದ್ದಾರೆ ಎಂದರೆ ತಪ್ಪಾಗದು.
ಕನ್ನಡದಲ್ಲಿ ಕೊರೋನ ಎಚ್ಚರಿಕೆ: ಕಳೆದ ವಾರದಿಂದಲೂ ಮೊಬೈಲ್ ಕಾಲರ್ ಟ್ಯೂನ್ ಕೊರೋನ ಬಗ್ಗೆ ಇಂಗ್ಲಿಷ್‌ನಲ್ಲಿ ಜಾಗೃತಿ ಮೂಡಿಸಲಾಗುತ್ತಿತ್ತು. ಮೊಬೈಲ್ ರಿಂಗ್ ಆಗುವ ಮೊದಲೇ ಕೆಮ್ಮುವ ಶಬ್ದವು ಬಹುತೇಕ ಮಂದಿಗೆ ಕಿರಿಕಿರಿಯಾಗುತ್ತಿತ್ತು. ಈ ಬಗ್ಗೆ ಸಾಮಾಜಿಕ ತಾಲತಾಣದಲ್ಲಿ ಸಾರ್ವಜನಿಕರು ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದರು. ಇನ್ನು ಟ್ರೋಲ್ ಪೇಜ್‌ಗಳು ಇವುಗಳನ್ನೇ ಆಹಾರವಾಗಿಸಿ ಕೊಂಡು ಸಿನಿಮಾಗಳ ವೀಡಿಯೊಗಳನ್ನು ಎಡಿಟ್ ಮಾಡಿಕೊಂಡು ಲಕ್ಷಾಂತರ ವೀಕ್ಷಣೆಗೊಳಗಾಗಿವೆ. ಎಚ್ಚೆತ್ತ ಮೊಬೈಲ್ ನೆಟ್‌ವರ್ಕ್ ಸಂಸ್ಥೆಗಳು ಕೊರೋನ ಕುರಿತ ಜಾಗೃತಿಯನ್ನು ಕನ್ನಡದಲ್ಲೇ ವಿವರಣೆ ಮಾಡುತ್ತಿವೆ.









