ಸುಧಾಮೂರ್ತಿ ಹೆಸರಿನಲ್ಲಿ ನಕಲಿ ಲೆಡರ್ ಹೆಡ್ ಸೃಷ್ಟಿಸಿ, ಫೋರ್ಜರಿ ಸಹಿ: ಆರೋಪಿ ಬಂಧನ

ಬೆಂಗಳೂರು, ಮಾ.15: ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಹೆಸರಿನಲ್ಲಿ ನಕಲಿ ಲೆಡರ್ ಹೆಡ್ ಸೃಷ್ಟಿಸಿ, ಫೋರ್ಜರಿ ಸಹಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎಲ್.ಸಾಯಿಕೃಷ್ಣ ಎಂಬಾತನನ್ನ ಜಯನಗರ ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷ ಫೆ.26ರಂದು ಆಫರ್ಸ್ ನಿಯರ್ ಬೈ ಎಂಬ ಮೊಬೈಲ್ ಅಪ್ಲಿಕೇಶನ್‌ಗೆ ಬ್ರಾಂಡ್ ಅಂಬಾಸಿಡರ್ ಹಾಗೂ ಪಾರ್ಟ್ನರ್ ಆಗುವಂತೆ ಸುಳ್ಳು ಮಾಹಿತಿ ನಮೂದಿಸಿ ಟಾಲಿವುಡ್ ಸ್ಟಾರ್ ವಿಜಯ ದೇವರಕೊಂಡಗೆ ರಿಜಿಸ್ಟರ್ ಪೋಸ್ಟ್ ಕಳುಹಿಸಲಾಗಿತ್ತು.
ಆರೋಪಿ ಸಾಯಿಕೃಷ್ಣ ತನ್ನ ಆನ್‌ಲೈನ್ ಅಪ್ಲೀಕೇಶನ್‌ಗೆ ಬ್ರಾಂಡ್ ಅಂಬಾಸಿಡರ್ ಹಾಗೂ ಪಾರ್ಟ್ನರ್ ಆಗುವಂತೆ ಸುಧಾಮೂರ್ತಿ ಹೆಸರಿನಲ್ಲಿ ನಕಲಿ ಲೆಡರ್ ಹೆಡ್ ಸೃಷ್ಟಿಸಿ, ಫೋರ್ಜರಿ ಸಹಿ ಮಾಡಿ ವಿಜಯ ದೇವರಕೊಂಡಗೆ ಈ ಪತ್ರ ಬರೆದಿದ್ದ ಎನ್ನಲಾಗಿದೆ.
ಬಳಿಕ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಆರೋಪಿ ಸುಮ್ಮನಾಗಿದ್ದ. ಈ ಸಂಬಂಧ ಆರೋಪಿ ವಿರುದ್ಧ ಕ್ರಮಕೈಗೊಳ್ಳುವಂತೆ ಇನ್ಫೋಸಿಸ್ ಪೌಂಡೇಷನ್ ಕಚೇರಿಯ ಲೆ. ಕರ್ನಲ್ ರಮೇಶ್ ದೂರು ನೀಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಯನಗರ ಪೊಲೀಸರು ಆರೋಪಿ ಎಲ್. ಸಾಯಿಕೃಷ್ಣನನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.





