ಜನತೆಯನ್ನು ಕೊರೋನ ಭೀತಿಗೆ ತಳ್ಳಿ ಖುಷಿಯಲ್ಲಿರುವ ಬಿಎಸ್‌ವೈ: ಐವನ್ ಡಿಸೋಜ
ಮಂಗಳೂರು, ಮಾ.15: ಕೊರೋನ ವೈರಸ್ ಹಿನ್ನೆಲೆಯಲ್ಲಿ ಮದುವೆ ಸಮಾರಂಭಗಳಿಗೆ ಕಡಿವಾಣ ಹಾಕಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬೆಳಗಾವಿಯ ಸಾವಿರಾರು ಮಂದಿ ಕೂಡಿದ್ದ ಮದುಗೆ ಸಮಾರಂಭದಲ್ಲಿ ಭಾಗಿಯಾಗುವ ಮೂಲಕ ತಾರತಮ್ಯ ಅನುಸರಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.
ಮುಖ್ಯಮಂತ್ರಿ ಬಂದ್ ಆದೇಶ ನೀಡಿ, ರಾಜ್ಯದ ಜನತೆಯಲ್ಲಿ ಮದುವೆ ಸಮಾರಂಭಗಳಲ್ಲಿ ಜನ ಸೇರದಂತೆ ಮಾಡಬೇಕು. ಕ್ಲಬ್, ಪಬ್, ಮಾಲ್‌ಗಳು ಮುಚ್ಚಬೇಕು. ಜನ ಸಂದಣಿ ಜಾಸ್ತಿ ಇರುವ ಕಾರ್ಯಕ್ರಮಗಳು ರದ್ದುಮಾಡಬೇಕು. ಕೊರೋನಾ ವೈರಸ್ ಬಗ್ಗೆ ಜಾಗೃತಿ ನೀಡಬೇಕೆಂದು ಹೇಳಿಕೆ ನೀಡಿದ್ದರು. ಆದರೆ ಮುಖ್ಯಮಂತ್ರಿಯೇ ಆ ನಿಯಮವನ್ನು ಪಾಲಿಸುತ್ತಿಲ್ಲ ಎಂದು ಟೀಕಿಸಿದರು.
ಕಳೆದ ಎರಡು ದಿನಗಳಿಮದ ಜನರು ಭಯಭೀತರಾಗಿ ಮನೆಬಿಟ್ಟು ಹೊರಬರುತ್ತಿಲ್ಲ. ಉದ್ದಿಮೆಗಳಿಗೆ ಮತ್ತು ವ್ಯಾಪಾರಸ್ಥರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ಈ ನಡುವೆ ಮುಖ್ಯಮಂತ್ರಿಯು ತಮ್ಮದೇ ಆದ ಆದೇಶವನ್ನು ಉಲ್ಲಂಘಿಸಿ ಬೆಳಗಾವಿಯಲ್ಲಿ ಸುಮಾರು ಐದು ಸಾವಿರಕ್ಕೂ ಹೆಚ್ಚು ಜನರು ಸೇರಿದ ಮದುವೆಯಲ್ಲಿ ಭಾಗವಿಸುವ ಮೂಲಕ ತಾನು ಮಾತ್ರ ಏನನ್ನಾದರೂ ಮಾಡಬಹುದು ಎನ್ನುವುದನ್ನು ಸಾಬೀತುಪಡಿಸಿದಂತಾಗಿದೆ. ಜನರನ್ನು ಭೀತಿಗೆ ತಳ್ಳಿ ತಾನು ಖುಷಿ ಅನುಭವಿಸುವುದು ಸಲ್ಲದು ಎಂದರು.
ಆ ಮದುವೆ ಸಮಾರಂಭದಲ್ಲಿ ಮುಖ್ಯಮಂತ್ರಿಗಳು, ಗೃಹ ಸಚಿವರು, ಸಂಸದರು ಮತ್ತು ಸಂಪುಟದ ಸಚಿವರು ಭಾಗವಹಿಸಿದರಿಂದ ಮುಖ್ಯಮಂತ್ರಿ ನೀಡಿದ ಮುನ್ನೆಚ್ಚರಿಕೆಗೆ ಯಾವುದೇ ಗೌರವ ಇಲ್ಲ ಮತ್ತು ಪಾಲಿಸಬೇಕಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ ಎಂದು ಐವನ್ ಡಿಸೋಜ ವಾಗ್ದಾಳಿ ನಡೆಸಿದರು.
ಸರಕಾರ ಹೊರಡಿಸಿದ ಆದೇಶವು ಬೇಲಿಯೇ ಎದ್ದು ಹೊಲ ಮೆಯ್ದಂತಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಕೂಡಲೇ ರಾಜ್ಯದ ಜನತೆಯಲ್ಲಿ ಕ್ಷೇಮಯಾಚನೆ ಮಾಡಬೇಕು. ಇದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಎಂದು ವಿಧಾನ ಪರಿಷತ್‌ನ ಸದಸ್ಯ ಮತ್ತು ಕೆಪಿಸಿಸಿ ವಕ್ತಾರ ಐವನ್ ಡಿಸೋಜ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.







