ಹೊರನಾಡು-ಶೃಂಗೇರಿ ಸಂಪರ್ಕ ರಸ್ತೆ ಅವ್ಯವಸ್ಥೆ
ಶಾಸಕರು, ಅಧಿಕಾರಿಗಳು ಗುತ್ತಿಗೆದಾರರ ನಿರ್ಲಕ್ಷ್ಯ: ಆರೋಪ

ಚಿಕ್ಕಮಗಳೂರು, ಮಾ.15: ಜಿಲ್ಲೆಯ ಹೊರನಾಡಿನಿಂದ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ಬಲಿಗೆ ಗ್ರಾಮದ ಆರು ಕಿ.ಮೀ. ರಸ್ತೆ ಕಾಮಗಾರಿ ಮಂಜೂರಾಗಿದೆ. ಆದರೆ ಗುತ್ತಿಗೆದಾರ ಕಳೆದೊಂದು ವರ್ಷದಲ್ಲಿ ಕೇವಲ ಮೂರು ಕಿ.ಮೀ ರಸ್ತೆ ಡಾಂಬರೀಕರಣ ನಡೆಸಿ ಉಳಿದ ರಸ್ತೆಗೆ ಜೆಲ್ಲಿ ಹಾಕಿ ಕೈಬಿಟ್ಟಿದ್ದಾರೆ ಇದರಿಂದಾಗಿ ಸ್ಥಳೀಯರು ತೊಂದರೆ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಜಿಲ್ಲೆಯ ಹೊರನಾಡು ಗ್ರಾಮದ ಸುತ್ತಮುತ್ತಲ ನಿವಾಸಿಗಳು ಆರೋಪಿಸಿದ್ದಾರೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಿಂದ ಶೃಂಗೇರಿ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹೊರನಾಡು ಸಮೀಪದ ಬಲಿಗೆ ಗ್ರಾಮದವರೆಗೆ ಆರು ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ರಾಜ್ಯ ಸರಕಾರ ಕಳೆದ ವರ್ಷ ಅನುದಾನ ಮಂಜೂರು ಮಾಡಿದೆ. ರಸ್ತೆ ಡಾಂಬರೀಕರಣ ಕಾಮಗಾರಿಗೆ 6 ಕೋಟಿ 73 ಲಕ್ಷ ರೂ. ಬಿಡುಗಡೆಯಾಗಿದ್ದು, ಗುತ್ತಿಗೆದಾರ 2019ರ ಮಾರ್ಚ್ ತಿಂಗಳಲ್ಲಿ ರಸ್ತೆ ಕಾಮಗಾರಿ ಆರಂಭಿಸಿದ್ದಾರೆ. 2020ರ ಮಾರ್ಚ್ ತಿಂಗಳಿಗೆ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭಿಸಿ ಒಂದು ವರ್ಷವಾಗಿದೆ. ಆದರೆ ಗುತ್ತಿಗೆದಾರರು ಕೇವಲ ಮೂರು ಕಿ.ಮೀ. ರಸ್ತೆಗೆ ಮಾತ್ರ ಡಾಂಬರೀಕರಣ ಮಾತ್ರ ಮಾಡಿದ್ದು, ಉಳಿದ ಮೂರು ಕಿ.ಮೀ. ರಸ್ತೆಗೆ ಜಲ್ಲಿ ಕಲ್ಲು ಹಾಕಿ ಕಾಮಗಾರಿಯನ್ನು ನಿಲ್ಲಿಸಿದ್ದಾರೆ. ಮೂರು ಕಿ.ಮೀ. ರಸ್ತೆ ಕಾಮಗಾರಿಯೂ ಕಳಪೆಯಿಂದ ಕೂಡಿದ್ದು, ಡಾಂಬರ್ ಕಿತ್ತು ಬರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ರಸ್ತೆಯಲ್ಲಿ ಕಡಿದಾದ ತಿರುವುಗಳಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಯಾತ್ರಿಗಳು ಪ್ರತಿನಿತ್ಯ ಸಾವಿರಾರು ವಾಹನಗಳಲ್ಲಿ ಇದೇ ರಸ್ತೆಯಲ್ಲಿ ಹೊರನಾಡಿನಿಂದ ಶೃಂಗೇರಿಗೆ ಸಂಚರಿಸುತ್ತಾರೆ. ಜೆಲ್ಲಿ ಹಾಕಿ ಡಾಂಬರೀಕರಣ ನಡೆಸದಿರುವುದರಿಂದ ವಾಹನ ಸವಾರರು, ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ. ಈ ಸಂಬಂಧ ಶಾಸಕರು, ಇಂಜಿನಿಯರ್‌ಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಗುತ್ತಿಗೆದಾರರು ದೂರವಾಣಿ ಕರೆಗೂ ಸಿಗುತ್ತಿಲ್ಲ ಎಂದು ದೂರಿದ್ದಾರೆ.
ಈ ಮಾರ್ಗದಲ್ಲಿನ ಏಳೆಂಟು ಕುಗ್ರಾಮಗಳ ಜನರು ಇದೇ ರಸ್ತೆ ಮಾರ್ಗವನ್ನು ಹೊರನಾಡು, ಕಳಸ, ಶೃಂಗೇರಿ ಪಟ್ಟಣಗಳ ಸಂಪರ್ಕಕ್ಕೆ ಅವಲಂಬಿಸಿವೆ. ರಸ್ತೆ ನಿರ್ಮಾಣಕ್ಕೆ ಕೈಹಾಕಿದ ಸರಕಾರ ಅರ್ಧಂಬರ್ಧ ಕೆಲಸ ಮಾಡಿ ಕೈಬಿಟ್ಟಿದೆ. ಈ ರಸ್ತೆಯಲ್ಲಿ ಬೀಳೋರು, ಏಳೋರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾಹನಗಳ ಅಪಘಾತವೂ ಸಂಭವಿಸುತ್ತಿದೆ. ಕಳೆದೊಂದು ವರ್ಷದಿಂದ ಜಲ್ಲಿ ಕಲ್ಲು ರಸ್ತೆಯ ಮೇಲೆ ಸರ್ಕಸ್ ಮಾಡಿ ವಾಹನಗಳನ್ನು ಓಡಿಸಿರುವ ಜನರು ಹೈರಾಣಾಗಿ ಹೋಗಿದ್ದಾರೆ.
ರಸ್ತೆಗೆ ಜಲ್ಲಿ ಹಾಕಿ ಹಾಗೇ ಬಿಟ್ಟಿದ್ದರಿಂದ ರಸ್ತೆ ಸರಿಯಿಲ್ಲ ಎಂಬ ಕಾರಣಕ್ಕೆ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ. ಗ್ರಾಮಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಆಟೊದಲ್ಲಿ ಓಡಾಡುವ ಪರಿಸ್ಥಿತಿ ಉಂಟಾಗಿದೆ. ದ್ವಿಚಕ್ರ ವಾಹನ ಸವಾರರು ಜಲ್ಲಿ ರಸ್ತೆಯಲ್ಲಿ ಸಂಚರಿಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ.ಶಾಲಾ ವಿದ್ಯಾರ್ಥಿಗಳಿಗೆ ಈಗ ರಜೆ ಸಿಕ್ಕಿದೆ. ಆದರೆ ಕಳೆದ ಕೆಲ ದಿನಗಳ ಹಿಂದೇ ಪೋಷಕರು ತಮ್ಮ ದ್ವಿಚಕ್ರವಾಹನದಲ್ಲಿ ಮಕ್ಕಳನ್ನು ಶಾಲೆಗೆ ಬಿಡುವಂತಹ ಪರಿಸ್ಥಿತಿ ಎದುರಾಗಿತ್ತು. ಸ್ಥಳೀಯ ಶಾಸಕರು ಅಧಿಕಾರಿಗಳು ತಕ್ಷಣ ರಸ್ತೆ ಕಾಮಗಾರಿ ಕೈಗೆತ್ತಿಕೊಂಡು ಗುಣಮಟ್ಟದ ರಸ್ತೆ ಕಾಮಗಾರಿ ನಡೆಸಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡಬೇಕು. ತಪ್ಪಿದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ರಸ್ತೆ ಕಾಮಗಾರಿ ಅರ್ಧಕ್ಕೆ ಬಿಟ್ಟಿರುವುದರಿಂದ ಹೊರನಾಡು ಶೃಂಗೇರಿ ಕ್ಷೇತ್ರಗಳಿಗೆ ತೆರಳುವ ಪ್ರವಾಸಿಗರಿಗೂ ತೊಂದರೆಯಾಗಿದೆ. ಸ್ಥಳೀಯರು ಕಳೆದೊಂದು ವರ್ಷದಿಂದ ನರಕಯಾತನೆ ಅನುಭವಿಸುತ್ತಿದ್ದಾರೆ. ಕ್ಷೇತ್ರದ ಶಾಸಕರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶೀಘ್ರದಲ್ಲಿ ಕ್ರಮಕೈಗೊಳ್ಳಬೇಕು. ತಪ್ಪಿದಲ್ಲಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ.
-ವಿಜಯ್‌ಪ್ರಸಾದ್, ಹೊರನಾಡು ನಿವಾಸಿ
ರಸ್ತೆ ಸರಿಯಿಲ್ಲ ಎಂಬ ಕಾರಣಕ್ಕೆ ಇದ್ದ ಬಸ್‌ಗಳು ಈ ರಸ್ತೆಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಿವೆ. ಸ್ಥಳೀಯರು ಮತ್ತು ಶಾಲಾ ವಿದ್ಯಾರ್ಥಿಗಳು ಆಟೊ, ಜೀಪ್‌ಗಳಲ್ಲಿ ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಮಗಳೂರು, ಮೂಡಿಗೆರೆ, ಬಾಳೆಹೊನ್ನೂರು ಪಟ್ಟಣಗಳಿಂದ ಕಳಸ ಮಾರ್ಗವಾಗಿ ಹೊರನಾಡಿಗೆ ಬರುವ ಪ್ರವಾಸಿಗರು ಈ ಮಾರ್ಗ ಬಳಸಿ ಶೃಂಗೇರಿಗೆ 32 ಕಿ.ಮೀ ಕ್ರಮಿಸಿದರೆ ಕಡಿಮೆ ಅವಧಿಯಲ್ಲಿ ಶೃಂಗೇರಿಗೆ ಹೋಗಬಹುದು. ರಸ್ತೆಯ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳು, ಶಾಸಕ ಎಂ.ಪಿ.ಕುಮಾರಸ್ವಾಮಿ ಅವರ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ. ಕೆಲ ಅಧಿಕಾರಿಗಳನ್ನು ಪ್ರಶ್ನಿಸಿದರೇ ಉಡಾಫೆ ಉತ್ತರ ನೀಡುತ್ತಾರೆ.
- ಶರತ್, ಬಲಿಗೆ ಗ್ರಾಮದ ನಿವಾಸಿ






.jpg)
.jpg)
.jpg)
.jpg)

