ಮಾಸ್ಕ್‌ಗಳ ಬೆಲೆ ಏರಿಸಿದರೆ ಕಠಿಣ ಕ್ರಮ: ಶೇಖ್ ತನ್ವೀರ್ ಆಸೀಫ್

ಬಳ್ಳಾರಿ, ಮಾ.15: ಕೊರೋನ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತಾಲೂಕು ಆಡಳಿತದ ವತಿಯಿಂದ ಕೈಗೊಳ್ಳಲಾಗಿದೆ.ಅದರಂತೆ ಮೆಡಿಕಲ್ ಶಾಪ್ ಹಾಗೂ ಚಿಲ್ಲರೆ ಅಂಗಡಿಗಳಲ್ಲಿ ಮಾಸ್ಕ್‌ಗಳ ಕೃತಕ ಬೇಡಿಕೆ ಸೃಷ್ಠಿಸಿ ಬೆಲೆ ಏರಿಸುವುದು ಅಪರಾಧವಾಗಿದ್ದು, ಅಂತಹ ಪ್ರಕರಣಗಳು ಕಂಡುಬಂದಲ್ಲಿ ಅಗತ್ಯ ಸರಕುಗಳ ಕಾಯ್ದೆ ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದೆಂದು ಸಹಾಯಕ ಆಯುಕ್ತ ಶೇಖ್ ತನ್ವೀರ್ ಆಸೀಫ್ ಎಚ್ಚರಿಕೆ ನೀಡಿದ್ದಾರೆ.
ರವಿವಾರ ಹೊಸಪೇಟೆ ತಾಲೂಕು ಕಚೇರಿಯ ಪತ್ರಿಕಾ ಭವನದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಖಾಸಗಿ ಸಂಸ್ಥೆಗಳ ಸದಸ್ಯರೊಂದಿಗೆ ಕೊರೋನ ವೈರಸ್ ಕುರಿತು ಏರ್ಪಡಿಸಿದ್ದ ಜಾಗೃತಿ ಸಭೆಯ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹಾಗೂ ವಿಶ್ವಪಾರಂಪರಿಕ ತಾಣವಾದ ಹಂಪಿಯಲ್ಲಿ ಯಾವುದೆ ರೀತಿಯ ಕೊರೋನ ಪ್ರಕರಣಗಳು ದಾಖಲಾಗಿಲ್ಲ. ವಿದೇಶದಿಂದ ಆಗಮಿಸಿದ ಕೆಲ ಭಾರತೀಯರ ತಪಾಸಣೆಗಳನ್ನು ಮಾತ್ರ ನಡೆಸಲಾಗಿದೆ. ಅದೇ ರೀತಿಯಾಗಿ ಹಂಪಿಗೆ ಪ್ರವಾಸಿಗರಿಗೆ ಭೇಟಿ ನಿರ್ಬಂಧಿಸಲಾಗಿದ್ದು, ವೈರಸ್ ಹರಡದಂತೆ ಸಕಲ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.
ಹಂಪಿಯ ವಿರೂಪಾಕ್ಷ ದೇವಸ್ಥಾನ, ವಿಜಯವಿಠ್ಠಲ ದೇವಸ್ಥಾನ ಆವರಣ, ಕಮಲಾಪುರದ ಹಳೆ ಪಂಚಾಯತ್‌ರಾಜ್ ಇಲಾಖೆ ಕಚೇರಿ ಸೇರಿದಂತೆ ನಗರದ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ತನ್ವೀರ್ ಆಸೀಫ್ ತಿಳಿಸಿದರು.
ಪ್ರವಾಸಿಗರ ನಿಷೇಧದ ಪರಿಣಾಮ ಹಂಪಿಯ 2 ಸ್ಕ್ರೀನಿಂಗ್ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದೇವಸ್ಥಾನಗಳ ಪ್ರವೇಶಕ್ಕೆ ಯಾವುದೇ ರೀತಿಯ ನಿರ್ಬಂಧವಿಲ್ಲ. ಮುಂಜಾಗೃತವಾಗಿ ಉತ್ಸವ, ಜಾತ್ರಾ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲು ಮುಜರಾಯಿ ಇಲಾಖೆಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ವಿದೇಶದಿಂದ ಮರಳಿ ಬಂದವರ ಪಟ್ಟಿ ಇನ್ನೂ ತಡವಾಗಿ ಸಿಗುವ ಕಾರಣ ಸಾರ್ವಜನಿಕರು ಖುದ್ದಾಗಿ ತಮ್ಮ ಸುತ್ತಮುತ್ತಲಿನಲ್ಲಿ ಕಾಣುವ ವಿದೇಶದಿಂದ ಬಂದ ಪ್ರವಾಸಿಗರ ಮಾಹಿತಿಯನ್ನು ನೀಡಿ ಸಹಕರಿಸಬೇಕು ಎಂದು ತನ್ವೀರ್ ಆಸೀಫ್ ಮನವಿ ಮಾಡಿದರು.
ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮಾದರಿಯಲ್ಲಿ ತಾಲೂಕು ಮಟ್ಟದಲ್ಲಿಯೂ ಸಹಾಯವಾಣಿ ತೆರೆದಿದ್ದು 08394-224208 ದಿನದ 24 ಗಂಟೆಯು ಸಹಾಯವಾಣಿಗೆ ಬರುವ ದೂರುಗಳಿಗೆ ತಕ್ಷಣ ಪ್ರತಿಕ್ರಿಯಿಸಿ ಪರಿಹಾರ ಸೂಚಿಸಲಾಗುತ್ತದೆ. ಸಾರ್ವಜನಿಕರು ವಿದೇಶದಿಂದ ಮರಳಿದವರ ಮಾಹಿತಿ ನೀಡಿ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.
ತಾಲೂಕಿನಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ ಅನುಮಾನಸ್ಪದ ಲಕ್ಷಣ ಕಂಡು ಬಂದವರ ತಪಾಸಣೆ ಹಾಗೂ ರಕ್ತಪರೀಕ್ಷೆ ಮಾತ್ರ ಮಾಡಲಾಗಿದೆ. ಸಾರ್ವಜನಿಕರು ಯಾವುದೇ ಭೀತಿ ಇಲ್ಲದೇ ಸುರಕ್ಷತೆ ಕಾಪಾಡಿ ವೈರಸ್ ಹರಡದಂತೆ ಕ್ರಮವಹಿಸಿ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಹಶೀಲ್ದಾರ್ ವಿಶ್ವನಾಥ್, ಡಿವೈಎಸ್ಪಿವಿ.ರಘುಕುಮಾರ್, ನಗರಸಭೆ ಪೌರಾಯುಕ್ತೆ ಜಯಲಕ್ಷ್ಮಿ, ತಾಲೂಕು ವೈದ್ಯಾಧಿಕಾರಿ ಭಾಸ್ಕರ್ ಹಾಗೂ ಸರ್ಜನ್ ಸಲೀಂ ಇದ್ದರು.







