ಸಾರ್ಕ್ ರಾಷ್ಟ್ರಗಳ ಕೊರೋನ ನಿಧಿಗೆ 1 ಕೋ. ಡಾಲರ್ ಕೊಡುಗೆ ಘೋಷಿಸಿದ ಪ್ರಧಾನಿ ಮೋದಿ

ಹೊಸದಿಲ್ಲಿ, ಮಾ. 15: ಕೊರೋನ ವೈರಸ್ ಸೋಂಕು ನಿಯಂತ್ರಣಕ್ಕೆ ‘ಸ್ವಯಂಪ್ರೇರಿತ ದೇಣಿಗೆ’ಮೂಲಕ ತುರ್ತು ನಿಧಿಯೊಂದನ್ನು ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ಕ್ ದೇಶಗಳಿಗೆ ಕರೆ ನೀಡಿದ್ದಾರೆ.
ಸಾರ್ಕ್ ದೇಶಗಳ ನಾಯಕರೊಂದಿಗೆ ಸಂವಾದದ ಸಂದರ್ಭ ಭಾರತ 1 ಕೋಟಿ ಡಾಲರ್ ಆರಂಭಿಕ ಕೊಡುಗೆಯನ್ನು ನೀಡಲಿದೆ ನರೇಂದ್ರ ಮೋದಿ ಅವರು ಘೋಷಿಸಿದ್ದಾರೆ.
ಸಾರ್ಕ್ ರಾಷ್ಟ್ರಗಳಲ್ಲಿ ಕೊರೋನ ವೈರಸ್ ನಿಯಂತ್ರಣ ಮತ್ತು ಮುನ್ನೆಚ್ಚರಿಕೆ ಕ್ರಮಗಳಿಗೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಸಾರ್ಕ್ ನಾಯಕ ಜೊತೆ ವೀಡಿಯೊ ಕಾನ್ಫರೆನ್ಸ್ ರವಿವಾರ ನಡೆಸಿದರು.
ಪ್ರಾರಂಭದಲ್ಲಿ ಸಭೆಯ ಉದ್ದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಾರ್ಕ್ ನಾಯಕರಿಗೆ ಮನವರಿಕೆ ಮಾಡಿ ಕೊಟ್ಟರು. ಅನಂತರ ಒಂದೊಂದೇ ಸಾರ್ಕ್ ದೇಶದ ನಾಯಕರು ತಮ್ಮ ಅಭಿಪ್ರಾಯ, ಸಲಹೆ ಮತ್ತು ತಮ್ಮ ದೇಶದಲ್ಲಿ ಕೊರೋನ ವೈರಸ್ ಪರಿಸ್ಥಿತಿಯನ್ನು ತೆರೆದಿಟ್ಟರು.
ಈ ವೀಡಿಯೊ ಕಾನ್ಫರೆನ್ಸ್‌ನಲ್ಲಿ ಮಾಲ್ಡಿವ್ ಅಧ್ಯಕ್ಷ ಇಬ್ರಾಹಿಂ ಮುಹಮ್ಮದ್ ಸೊಲಿಹ್, ಶ್ರೀಲಂಕಾ ಪ್ರಧಾನಿ ಗೊಟಬಯ ರಾಜಪಕ್ಷೆ, ಭೂತಾನ್ ಪ್ರಧಾನಿ ಲೋಟೆ ತ್ಯೆರಿಂಗ್, ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ, ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಭಾಗವಹಿಸಿದ್ದರು. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಭಾಗವಹಿಸಿರಲಿಲ್ಲ. ಆದರೆ, ಅವರ ಪ್ರತಿನಿಧಿಯಾಗಿ ಡಾ. ಝಾಫರ್ ಮಿರ್ಜಾ ಪಾಲ್ಗೊಂಡರು.







