ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಮೇ ತಿಂಗಳ ವೇಳೆಗೆ ದಿವಾಳಿ!

ಹಾಂಕಾಂಗ್, ಮಾ. 16: ಕೊರೋನವೈರಸ್ ಸಾಂಕ್ರಾಮಿಕದಿಂದಾಗಿ ಮೇ ತಿಂಗಳ ಕೊನೆಯ ವೇಳೆಗೆ ಜಗತ್ತಿನ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ದಿವಾಳಿಯಾಗುತ್ತವೆ ಎಂದು ಜಾಗತಿಕ ವಿಮಾನಯಾನ ಸಲಹಾ ಸಂಸ್ಥೆ ಸಿಎಪಿಎ ಸೋಮವಾರ ಅಭಿಪ್ರಾಯಪಟ್ಟಿದೆ. ಸರಕಾರ ಮತ್ತು ಉದ್ಯಮವು ತಕ್ಷಣ ತೆಗೆದುಕೊಳ್ಳುವ ಸಂಘಟಿತ ಕ್ರಮಗಳು ಮಾತ್ರ ಈ ವಿಪತ್ತನ್ನು ತಡೆಯಬಹುದು ಎಂದು ಅದು ಹೇಳಿದೆ.
‘‘ಕೊರೋನವೈರಸ್ ಸಾಂಕ್ರಾಮಿಕದ ಪರಿಣಾಮ ಮತ್ತು ಜಗತ್ತಿನಾದ್ಯಂತ ಸರಕಾರಗಳು ಹೇರುತ್ತಿರುವ ಪ್ರಯಾಣ ನಿಷೇಧ ಕ್ರಮಗಳಿಂದಾಗಿ ಜಗತ್ತಿನಾದ್ಯಂತ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಬಹುಷಃ ತಾಂತ್ರಿಕವಾಗಿ ಈಗಾಗಲೇ ದಿವಾಳಿ ಹಂತಕ್ಕೆ ಬಂದಿವೆ ಅಥವಾ ಸಾಲ ಮರುಪಾವತಿಯಲ್ಲಿ ವಿಫಲವಾಗಿವೆ’’ ಎಂದು ಸಿಎಪಿಎ ಬಿಡುಗಡೆ ಮಾಡಿದ ಹೇಳಿಕೆಯೊಂದು ತಿಳಿಸಿದೆ.
ಕೊರೋನವೈರಸ್ ಕಾಯಿಲೆಯು ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ, ಜಗತ್ತಿನಾದ್ಯಂತದ ವಿಮಾನಯಾನ ಸಂಸ್ಥೆಗಳು ಭಾರೀ ಪ್ರಮಾಣದಲ್ಲಿ ತಮ್ಮ ಸೇವೆಗಳನ್ನು ಕಡಿತಗೊಳಿಸುತ್ತಿವೆ. ಉದಾಹರಣೆಗೆ; ಅಟ್ಲಾಂಟದ ಡೆಲ್ಟಾ ಏರ್‌ಲೈನ್ಸ್ ರವಿವಾ ಪ್ರಕಟನೆಯೊಂದನ್ನು ನೀಡಿ, 300 ವಿಮಾನಗಳನ್ನು ಹಾರಾಟದಿಂದ ಹೊರಗಿಡುವುದಾಗಿ ಹಾಗೂ ವಿಮಾನ ಹಾರಾಟಗಳನ್ನು 40 ಶೇಕಡದಷ್ಟು ಕಡಿತಗೊಳಿಸುವುದಾಗಿ ತಿಳಿಸಿದೆ.
ಐರೋಪ್ಯ ಒಕ್ಕೂಟ, ಐರ್‌ಲ್ಯಾಂಡ್ ಮತ್ತು ಬ್ರಿಟನ್ ನಾಗರಿಕರಿಗೆ ನೀಡಲಾಗಿರುವ ಎಲ್ಲ ಪ್ರವಾಸಿ ವೀಸಾಗಳನ್ನು ಅಮೆರಿಕ ಸ್ಥಗಿತಗೊಳಿಸಿದೆ. ಅದೇ ರೀತಿ, ಭಾರತ ಸರಕಾರವೂ ಮಾರ್ಚ್ 11ರಂದು ಮತ್ತು ಅದಕ್ಕಿಂತ ಮೊದಲು ನೀಡಲಾಗಿದ್ದ ಎಲ್ಲ ಪ್ರವಾಸಿ ವೀಸಾಗಳು ಮತ್ತು ಇ-ವೀಸಾಗಳನ್ನು ಅಮಾನತಿನಲ್ಲಿಟ್ಟಿದೆ.







