ಸಕಾರಾತ್ಮಕ ಚಿಂತನೆಯಿಂದ ಉತ್ತಮ ಆರೋಗ್ಯ: ಡಾ.ಶಿವರಾಜ ಪಾಟೀಲ್

ಉಡುಪಿ, ಮಾ.16: ಪ್ರಕೃತಿ ಮತ್ತು ಮನುಷ್ಯನ ನಡುವೆ ಅವಿನಾಭಾವ ಸಂಬಂಧ ಇದೆ. ಒಳ್ಳೆಯ ಬದುಕು ಸಾಧ್ಯವಾಗಬೇಕಾದರೆ ಒಳ್ಳೆಯ ಮನಸ್ಸು, ಒಳ್ಳೆಯ ಬುದ್ಧಿ ಮತ್ತು ಒಳ್ಳೆಯ ಚಿಂತನೆ ಬೇಕು. ಮನಸ್ಸಿನಲ್ಲಿ ಹುದುಗಿರುವ ನಕಾರಾತ್ಮಕ ಅಂಶಗಳನ್ನು ಹೊರಹಾಕಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಿ ಕೊಂಡರೆ ಮಾನಸಿಕ ಆರೋಗ್ಯ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು ಎಂದು ಪರೀಕದ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಆಸ್ಪತ್ರೆಯ ವೈದ್ಯ ಡಾ. ಶಿವರಾಜ ಪಾಟೀಲ್ ಹೇಳಿದ್ದಾರೆ.
ಉಡುಪಿಯ ಅಜ್ಜರಕಾಡಿನ ಡಾ. ಜಿ.ಶಂಕರ್ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಒಂದು ದಿನದ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರವನ್ನು ಉ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾಲೇಜಿನ ಪ್ರಾಚಾರ್ಯ ಡಾ.ಭಾಸ್ಕರ್ ಶೆಟ್ಟಿ ಎಸ್. ಅಧ್ಯಕ್ಷತೆ ವಹಿಸಿದ್ದರು. ಆಂತರಿಕ ಗುಣಮಟ್ಟ ಖಾತರಿ ಘಟಕದ ಸಂಚಾಲಕ ಪ್ರೊ.ಸೋಜನ್ ಕೆ.ಜಿ. ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಎನ್.ನಿತ್ಯಾನಂದ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದೀಪಾ ವಂದಿಸಿದರು. ಸ್ವೀಡಲ್ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಪರೀಕ ಆಸ್ಪತ್ರೆಯ ನುರಿತ ವೈದ್ಯರ ತಂಡವು ವಿದ್ಯಾರ್ಥಿನಿಯರು, ಉಪನ್ಯಾಸಕರು ಮತ್ತು ಬೋಧಕೇತರ ಸಿಬ್ಬಂದಿ ಯವರ ಆರೋಗ್ಯ ತಪಾಸಣೆ ನಡೆಸಿ ಸ್ಥಳದಲ್ಲಿಯೇ ಜಲತೆರಪಿ, ಆಕ್ಯೂಪ್ರೆಶರ್ ಚಿಕಿತ್ಸೆ, ಯೋಗ ಚಿಕಿತ್ಸೆ ನೀಡಿ ಉಚಿತವಾಗಿ ಔಷಧಿಗಳನ್ನು ನೀಡಿದರು.







