ದಿಲ್ಲಿ ಹಿಂಸಾಚಾರ: ವೀಡಿಯೊ ದೃಶ್ಯಾವಳಿ ಸಂರಕ್ಷಿಸುವಂತೆ ದಿಲ್ಲಿ ಹೈಕೋರ್ಟ್ ನೋಟಿಸ್

ಹೊಸದಿಲ್ಲಿ, ಮಾ. 14: ದಿಲ್ಲಿ ಗಲಭೆಯಲ್ಲಿ ಹಾನಿಯಾದ ಪ್ರದೇಶದ ವೀಡಿಯೊ ದೃಶ್ಯಾವಳಿಗಳನ್ನು ಸಂರಕ್ಷಿಸಿ ಇರಿಸುವಂತೆ ಕೋರಿ ಸಲ್ಲಿಸಲಾದ ಮನವಿಯ ಹಿನ್ನೆಲೆಯಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯ ಸೋಮವಾರ ಕೇಂದ್ರ ಸರಕಾರ, ದಿಲ್ಲಿ ಸರಕಾರ ಹಾಗೂ ದಿಲ್ಲಿ ಪೊಲೀಸರಿಗೆ ನೋಟಿಸು ಜಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಹಾಗೂ ನ್ಯಾಯಮೂರ್ತಿ ಹರಿಶಂಕರ್ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ ಕೇಂದ್ರ ಸರಕಾರ, ದಿಲ್ಲಿ ಸರಕಾರ ಹಾಗೂ ದಿಲ್ಲಿ ಪೊಲೀಸರಿಗೆ ಈ ನೋಟಿಸು ನೀಡಿದೆ. ಫೆಬ್ರವರಿ 23ರಿಂದ ಮಾರ್ಚ್ 1ರ ವರೆಗೆ ದಿಲ್ಲಿಯಲ್ಲಿ ನಡೆದ ಗಲಭೆ ಸಂದರ್ಭ ಸಂತ್ರಸ್ತವಾದ ಪ್ರದೇಶಗಳ ಎಲ್ಲ ವೀಡಿಯೊ ದೃಶ್ಯಾವಳಿಗಳ ಸಂರಕ್ಷಿಸಿ ಇರಿಸುವಂತೆ ಆಗ್ರಹಿಸಿ ಜಮೀಯತ್ ಉಲೆಮಾ-ಎ-ಹಿಂದ್ ಮನವಿ ಸಲ್ಲಿಸಿತ್ತು. ಸಾಕ್ಷ್ಯಗಳನ್ನು ಸಂಗ್ರಹಿಸುವ ಉದ್ದೇಶದಿಂದ ಅವಶೇಷಗಳನ್ನು ತೆರವುಗೊಳಿಸಬಾರದು ಎಂದು ಅದು ಮನವಿಯಲ್ಲಿ ಹೇಳಿತ್ತು. ಈ ಪ್ರಕರಣದಲ್ಲಿ ಪಾರದರ್ಶಕ ತನಿಖೆಯ ಅಗತ್ಯದ ಬಗ್ಗೆ ಬೆಳಕು ಚೆಲ್ಲಿರುವ ದೂರುದಾರರು, ಸುಪ್ರೀಂ ಕೋರ್ಟ್ ಅಥವಾ ದಿಲ್ಲಿ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರೂಪಿಸುವಂತೆ ನ್ಯಾಯಾಲಯದಲ್ಲಿ ಮನವಿ ಮಾಡಿದರು.
ಇದಲ್ಲದೆ ಗಲಭೆಯ ಯೋಜನೆ, ಸಿದ್ಧತೆ ಹಾಗೂ ಪರಿಣಾಮಗಳ ಎಲ್ಲ ಆಯಾಮಗಳ ಬಗ್ಗೆ ಪ್ರತ್ಯೇಕ ಹಾಗೂ ವಿಶೇಷ ಅಧಿಕಾರ ಹೊಂದಿರುವ ತಂಡ ತನಿಖೆ ನಡೆಸಬೇಕು ಎಂದು ಮನವಿ ಮಾಡಿದರು. ತನಿಖೆಯು ರಾಜ್ಯಾಡಳಿತ, ಗಲಭೆ ಪೀಡಿತ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಸಾಮಾಜಿಕ, ರಾಜಕೀಯ ಸಂಘಟನೆಗಳು, ಗಲಭೆಯ ಮುನ್ನ ಹಾಗೂ ನಂತರ ಸಾರ್ವಜನಿಕವಾಗಿ ಸಕ್ರಿಯವಾಗಿರುವ ಎಲ್ಲ ರಾಜಕಾರಣಿಗಳ ನೆರವು ಹಾಗೂ ಪ್ರಚೋದನೆ ಬಗ್ಗೆ ತನಿಖೆ ಪರಿಶೀಲನೆ ನಡೆಸಬೇಕು ಎಂದು ಮನವಿ ಕೋರಿದೆ.
ಹಿಂಸಾಚಾರದಲ್ಲಿ ನಿರ್ದಿಷ್ಟ ಪೊಲೀಸ್ ಅಧಿಕಾರಿಗಳ ಭಾಗವಹಿಸುವಿಕೆಯ ಸಾಧ್ಯತೆಯ ಬಗ್ಗೆ ಆರೋಪಿಸಿದ ದೂರುದಾರರು, ಗಲಭೆಯಲ್ಲಿ ಉದ್ದೇಶಪೂರ್ವಕವಾಗಿ ನಿಷ್ಕ್ರಿಯರಾದ ಅಥವಾ ಪಾಲ್ಗೊಂಡಿರುವ ಪೊಲೀಸರ ವಿರುದ್ಧ ಕ್ರಿಮಿನಲ್ ಹಾಗೂ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳಲು ನಿರ್ದೇಶಿಸುವಂತೆ ಮನವಿ ಆಗ್ರಹಿಸಿದೆ. 1984ರ ಗಲಬೆಯ ಸಂತ್ರಸ್ತರಿಗೆ ಪರಿಹಾರ ನೀಡಿದ ಯೋಜನೆಯ ರೀತಿಯ ಯೋಜನೆಯಲ್ಲಿ ಎಲ್ಲ ಗಲಭೆ ಸಂತ್ರಸ್ತರಿಗೆ ಸಾಕಷ್ಟು ಪರಿಹಾರ ನೀಡುವಂತೆ ದಿಲ್ಲಿ ಸರಕಾರಕ್ಕೆ ನಿರ್ದೇಶ ನೀಡುವಂತೆ ದೂರುದಾರರು ಮನವಿಯಲ್ಲಿ ಆಗ್ರಹಿಸಿದ್ದಾರೆ.







