ನಿರ್ಭಯ ಪ್ರಕರಣ: ಆರೋಪಿಯ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ, ಮಾ. 16: ತನ್ನ ಮರಣದಂಡನೆಗೆ ತಡೆ ನೀಡುವಂತೆ ಕೋರಿ ಹೊಸ ಪರಿಹಾರಾತ್ಮಕ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಕೋರಿ ನಿರ್ಭಯ ಅತ್ಯಾಚಾರ ಪ್ರಕರಣದ ನಾಲ್ವರು ಆರೋಪಿಗಳಲ್ಲಿ ಓರ್ವ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋಟ್ ಸೋಮವಾರ ತಿರಸ್ಕರಿಸಿದೆ.
ಯಾವುದೇ ಪರಿಹಾರ ಉಳಿದಿಲ್ಲ ಎಂದು ಸಂದರ್ಭ ಹೇಳುತ್ತಿದೆ. ನಿಮಗೆ (ಮುಖೇಶ್ ಸಿಂಗ್) ಕ್ಷಮಾದಾನ ಅರ್ಜಿ ಸಲ್ಲಿಸುವ ಅವಕಾಶ ಸಿಕ್ಕಿದೆ. ಅದನ್ನು ತಿರಸ್ಕರಿಸಲಾಗಿದೆ. ವಾರಂಟ್ ಜಾರಿಗೊಳಿಸಲಾಗಿದೆ. ಪರಿಹಾರಾತ್ಮಕ ಅರ್ಜಿ ತಿರಸ್ಕರಿಸಲಾಗಿದೆ. ನಿಮಗೆ ಉಳಿದಿರುವ ಪರಿಹಾರ ಏನು ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ನ್ಯಾಯಾಲಯ ನೀಡಿದ ಎಲ್ಲ ಆದೇಶಗಳನ್ನು ಹಾಗೂ ತನ್ನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಿರಸ್ಕರಿಸಿರುವುದನ್ನು ರದ್ದುಗೊಳಿಸುವಂತೆ ಮುಖೇಶ್ ಸಿಂಗ್ ಮನವಿಯಲ್ಲಿ ಆಗ್ರಹಿಸಿದ್ದ.
ಈ ಪ್ರಕರಣದಲ್ಲಿ ಕೇಂದ್ರ ಸರಕಾರ, ದಿಲ್ಲಿ ಸರಕಾರ ಹಾಗೂ ಆ್ಯಮಿಕಸ್ ಕ್ಯೂರಿ (ಸರಕಾರದ ಕಾನೂನು ಸಲಹೆಗಾರ್ತಿ) ಆಗಿ ಕಾರ್ಯ ನಿರ್ವಹಿಸಿದ ನ್ಯಾಯವಾದಿ ವೃಂದಾ ಗ್ರೋವರ್‌ರ ಕ್ರಿಮಿನಲ್ ಪಿತೂರಿ ಹಾಗೂ ವಂಚನೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ನ್ಯಾಯವಾದಿ ಎಂ.ಎಲ್. ಶರ್ಮಾ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ ಮುಖೇಶ್ ಹೇಳಿದ್ದಾನೆ.







