ಮೈಸೂರಿನಲ್ಲಿ ಹಕ್ಕಿಜ್ವರ ದೃಢ: ಕೋಳಿ ಮಾಂಸ ತ್ಯಜಿಸಲು ಜಿಲ್ಲಾಡಳಿತ ಸೂಚನೆ
ನಾಳೆಯಿಂದ ಪಕ್ಷಿಗಳ 'ಕಲ್ಲಿಂಗ್ ಆಪರೇಷನ್'

ಸಾಂದರ್ಭಿಕ ಚಿತ್ರ
ಮೈಸೂರು,ಮಾ.16: ಮೈಸೂರಿನಲ್ಲಿ ಹಕ್ಕಿಜ್ವರ ಇರುವುದು ದೃಢಪಟ್ಟಿದ್ದು, ಇತ್ತೀಚೆಗೆ ಸಾವಿಗೀಡಾದ ಕೊಕ್ಕರೆಗಳು ಹಕ್ಕಿಜ್ವರದಿಂದಲೆ ಸಾವನ್ನಪ್ಪಿರುವುದು ಎಂಬ ವರದಿ ಬಂದಿದೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ಕುಂಬಾರಕೊಪ್ಪಲು ವ್ಯಾಪ್ತಿಯ 10 ಕಿ.ಮೀ ವ್ಯಾಪ್ತಿಯಲ್ಲಿ ಕೋಳಿ ಅಂಗಡಿಗಳನ್ನು ಬಂದ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಸಂಜೆ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹೆಬ್ಬಾಳು ಕೆರೆ ವ್ಯಾಪ್ತಿ ಸೇರಿದಂತೆ ವಿವಿಧೆಡೆ ಇತ್ತೀಚೆಗೆ ಸಾವಿಗೀಡಾಗಿದ್ದ ಕೊಕ್ಕರೆಗಳು ಹಕ್ಕಿಜ್ವರದಿಂದ ಸಾವನ್ನಪ್ಪಿರುವುದು ದೃಢವಾಗಿದೆ. ಹಾಗೆಯೇ ಕುಂಬಾರಕೊಪ್ಪಲಿನ ಮನೆಯೊಂದರಲ್ಲಿ ಹಕ್ಕಿಜ್ವರದಿಂದ ಕೋಳಿಗಳು ಸಾವನ್ನಪಿದ್ದವು. ಈ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಮಧ್ಯಾಹ್ನ ವರದಿ ಬಂದಿದ್ದು ಹಕ್ಕಿಜ್ವರದಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಕುಂಬಾರಕೊಪ್ಪಲು ವ್ಯಾಪ್ತಿಯ 10.ಕೀ.ಮಿ ವ್ಯಾಪ್ತಿಯಲ್ಲಿ ನಾಳೆಯಿಂದ ಕೋಳಿ ಅಂಗಡಿಗಳನ್ನು ಬಂದ್ ಮಾಡಲಾಗುವುದು ಎಂದು ಹೇಳಿದರು.
ಹಕ್ಕಿಗಳು ಸಾವನ್ನಪ್ಪಿರುವ ಪ್ರದೇಶದ 1 ಕೀ.ಮಿ. ವ್ಯಾಪ್ತಿಯಲ್ಲಿ ಸಾಕಲಾಗುತ್ತಿರುವ ಪಕ್ಷಿಗಳನ್ನು ನಾಳೆಯಿಂದ ಕಲ್ಲಿಂಗ್ (ಬರ್ನಿಂಗ್) ಆಪರೇಷನ್ ಮಾಡಲಾಗುವುದು. ನಮ್ಮ ಅಧಿಕಾರಿಗಳ ತಂಡ ಈಗಾಗಲೇ ಪ್ರತಿ ಮನೆಯ ಸರ್ವೆಕಾರ್ಯಕ್ಕೆ ಮುಂದಾಗಿದ್ದು, ಮನೆಗಳಲ್ಲಿ ಸಾಕುತ್ತಿರುವ ಎಲ್ಲಾ ಪಕ್ಷಿಗಳನ್ನು ಸಾಮೂಹಿಕವಾಗಿ ಸಾಯಿಸಲಾಗುವುದು ಎಂದು ಹೇಳಿದರು.
ಹಕ್ಕಿಜ್ವರದಿಂದ ಜನರು ಆತಂಕ ಪಡುವ ಅಗತ್ಯವಿಲ್ಲ, ಹಕ್ಕಿಜ್ವರ ಮನುಷ್ಯರಿಗೆ ತಟ್ಟುವುದಿಲ್ಲ, ಪಕ್ಷಿಗಳ ಜೊತೆ ತೀರ ಸಂಪರ್ಕ ಇಟ್ಟುಕೊಂಡಿರುವವರಿಗೆ ಮಾತ್ರ ತಗಲುತ್ತದೆ ಎಂದು ಹೇಳಲಾಗುತ್ತಿದೆ. ಆದರೆ ಅದೂ ಕಡಿಮೆ. ಹಾಗಾಗಿ ಸಾರ್ವಜನಿಕರು ಆತಂಕಕ್ಕೆ ಒಳಗಾಗುವುದು ಬೇಡ ಎಂದು ಹೇಳಿದರು.
ಮನೆಗಳಲ್ಲಿ ಸಾಕಲಾಗುತ್ತಿರುವ ಯಾವುದೇ ಪಕ್ಷಿಗಳಿರಬಹುದು, ಅವುಗಳನ್ನು ಪತ್ತೆ ಹಚ್ಚಿ ಸಾಯಿಸಲಾಗುವುದು. ಮನೆಗಳಲ್ಲಿ ಸಾಕಲಾಗುವ ನಾಟಿ ಕೋಳಿ, ಫಾರಂ ಕೋಳಿ, ಬಾತುಕೋಳಿ ಸೇರಿದಂತೆ ಇನ್ನಿತರೆ ಪಕ್ಷಿಗಳನ್ನು ಸಾಮೂಹಿಕವಾಗಿ ನಿರ್ಜನ ಪ್ರದೇಶದಲ್ಲಿ ಕೊಲ್ಲಲಾಗುವುದು. ಆ ಪ್ರದೇಶಗಳಿಗೆ ಯಾರಿಗೂ ಅವಕಾಶವಿಲ್ಲ, ಈ ತಂಡದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಕಿಟ್, ಮಾಸ್ಕ್ ಸೇರಿದಂತೆ ಅವರ ರಕ್ಷಣೆಗೆ ಬೇಕಾಗುವ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಹೇಳಿದರು.
ಹಕ್ಕಿಜ್ವರದಿಂದ ಸಾರ್ವಜನಿಕರಿಗೆ ತೊಂದರೆ ಇಲ್ಲ. ಆದರೆ ಇನ್ನೆರಡು ಮೂರು ದಿನ ತಹಬದಿಗೆ ಬರುವವರೆಗೆ ಸಾರ್ವಜನಿಕರು ಕೋಳಿ ಮಾಂಸವನ್ನು ಸೇವಿಸಬಾರದು ಎಂದ ಅವರು, ಒಂದು ವೇಳೆ ಕೋಳಿ ಮಾಂಸ ತಿನ್ನಬೇಕು ಎನ್ನುವವರು ಅದನ್ನು ಚೆನ್ನಾಗಿ ಬೇಯಿಸಿ ನಂತರ ಸೇವಿಸಬಹುದು. ಆದರೆ ಸ್ವಲ್ಪ ದಿನ ಕೋಳಿ ಮಾಂಸ ತಿನ್ನದಿದ್ದರೆ ಒಳ್ಳೆಯದು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನಗರಪಾಲಿಕೆ ಆಯುಕ್ತ ಗುರುದತ್ತ್ ಹೆಗಡೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.







