ಕೊರೋನವೈರಸ್: ಇಟಲಿಯಲ್ಲಿ ಒಂದೇ ದಿನದಲ್ಲಿ 368 ಸಾವು

ರೋಮ್ (ಇಟಲಿ), ಮಾ. 16: ಇಟಲಿಯಲ್ಲಿ ರವಿವಾರ ಒಂದೇ ದಿನ ಕೊರೋನವೈರಸ್‌ನಿಂದಾಗಿ 368 ಮಂದಿ ಮೃತಪಟ್ಟಿದ್ದಾರೆ. ಇದು ದೇಶದಲ್ಲಿ ಒಂದು ದಿನದಲ್ಲಿ ಸಂಭವಿಸಿದ ಅತ್ಯಧಿಕ ಸಾವಾಗಿದೆ.
ಇದರೊಂದಿಗೆ ಇಟಲಿಯಲ್ಲಿ ಕೊರೋನವೈರಸ್‌ನಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 1,809ಕ್ಕೆ ಏರಿದೆ.
ಈ ನಡುವೆ, ನಮ್ಮಲ್ಲಿನ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ಕೃತಕ ಉಸಿರಾಟದ ಯಂತ್ರಗಳ ಕೊರತೆಯಿದೆ ಎಂದು ಉತ್ತರ ಇಟಲಿಯ ನಾಯಕರು ಎಚ್ಚರಿಸಿದ್ದಾರೆ. ಅದೇ ವೇಳೆ, ಕಠಿಣ ನಿರ್ಧಾರವೊಂದನ್ನು ತೆಗೆದುಕೊಂಡಿರುವ ವ್ಯಾಟಿಕನ್ ‘ಈಸ್ಟರ್ ವೀಕ್’ ಆಚರಣೆಗಳನ್ನು ರದ್ದುಗೊಳಿಸಿದೆ.
ಯುರೋಪ್‌ನ ಇತರ ಕೊರೋನವೈರಸ್ ಕೇಂದ್ರ ಬಿಂದುಗಳಾಗಿರುವ ಸ್ಪೇನ್ ಮತ್ತು ಫ್ರಾನ್ಸ್‌ಗಳಾದ್ಯಂತ ಕೆಫೆಗಳು, ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿದೆ. ಅತ್ಯಗತ್ಯವಲ್ಲದ ಎಲ್ಲ ಅಂಗಡಿಗಳನ್ನು ಮುಚ್ಚುವಂತೆ ಫ್ರಾನ್ಸ್ ಆದೇಶ ನೀಡಿದೆ ಹಾಗೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಸ್ಪೇನ್, ಕೆಲಸಕ್ಕೆ, ವೈದ್ಯರಲ್ಲಿಗೆ ಮತ್ತು ಆಹಾರ ಖರೀದಿಸಲು ಹೊರ ಹೋಗುವುದನ್ನು ಹೊರತುಪಡಿಸಿ ಇತರ ಯಾವ ಕಾರಣಗಳಿಗಾಗಿಯೂ ಹೊರಹೋಗದಂತೆ ತನ್ನ ಪ್ರಜೆಗಳಿಗೆ ಸೂಚಿಸಿದೆ.





