ಮಗನ ಸಾವಿಗೆ ಬಸ್ ನಿರ್ವಾಹಕನ ನಿರ್ಲಕ್ಷ ಕಾರಣ ಆರೋಪ: ತಾಯಿಯ ಸಾಮಾಜಿಕ ಜಾಲತಾಣದ ಮನವಿಗೆ ಸ್ಪಂದಿಸಿದ ಡಿಸಿ !

ಸುಹಾಸ್
ಉಡುಪಿ, ಮಾ.16: ಬಸ್ ಪ್ರಯಾಣದಲ್ಲಿ ತನ್ನ ಮಗ ಸಾವನ್ನಪ್ಪಲು ಕಾರಣರಾಗಿರುವ ಬಸ್ಸಿನ ನಿರ್ವಾಹಕನ ವಿರುದ್ಧ ಕಾನೂನು ಕ್ರಮ ಜರಗಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮೃತರ ತಾಯಿಯ ಮನವಿಗೆ ಸ್ಪಂದಿಸಿದ ಉಡುಪಿ ಜಿಲ್ಲಾಧಿಕಾರಿ ಜಗದೀಶ್, ಈ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ತಾಯಿಗೆ ಸೂಚನೆ ನೀಡಿದ್ದಾರೆ.
ಕುಂದಾಪುರ ತಾಲೂಕಿನ ಬಳ್ಕೂರು ದೇವಸ್ಥಾನ ಬೆಟ್ಟು ನಿವಾಸಿ ಎಸ್.ಶ್ರೀಧರ ಮೂರ್ತಿ ಹಾಗೂ ಸುಮ ಮಯ್ಯ ದಂಪತಿಯ ಏಕೈಕ ಪುತ್ರ ಸುಹಾಸ್ ಎಸ್. (22) ಬೆಂಗಳೂರಿನಲ್ಲಿ 4ನೆ ವರ್ಷದ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಮಾ.7ರಂದು ರಾತ್ರಿ ಬಸ್ಸಿನಲ್ಲಿ ಊರಿಗೆ ಹೊರಟ ಸುಹಾಸ್ ಪ್ರಯಾಣದ ಮಧ್ಯೆ ಬಸ್ಸಿನಲ್ಲಿ ಮಲಗಿದ್ದಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಮಗನನ್ನು ಕಳೆದುಕೊಂಡ ತಾಯಿ ಸುಮಾ ಮಯ್ಯ, ಸಾಮಾಜಿಕ ಜಾಲತಾಣಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಯನ್ನು ಬರೆದಿದ್ದಾರೆ. ‘ಮಾ.7ರಂದು ಬೆಂಗಳೂರಿನಿಂದ ಕುಂದಾಪುರಕ್ಕೆ ರಾತ್ರಿ 9:45ರ ದುರ್ಗಾಂಬಾ ಬಸ್ಸಿನಲ್ಲಿ ಹೊರಟಿದ್ದ ಮಗ, ಮಧ್ಯರಾತ್ರಿ ನಂತರ ದಾರಿ ಮಧ್ಯೆ ಸುಸ್ತಾಗಿ ಎದೆ ನೋವು ಬರುತ್ತಿದೆ ಎಂದು ನಿರ್ವಾಹಕನ ಬಳಿ ಎರಡೆರಡು ಬಾರಿ ಹೇಳಿದ್ದಾನೆ ಆದರೆ ಬಸ್ಸಿನ ನಿರ್ವಾಹಕ ಅವನ ಮಾತನ್ನು ತುಂಬಾ ಲಘುವಾಗಿ ತೆಗೆದು ಕೊಂಡಿದ್ದಾನೆ. ಅಲ್ಲದೆ ಬಸ್ಸನ್ನು ನಿಲ್ಲಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ಆದ್ದರಿಂದಲೇ ನನ್ನ ಮಗ ದುರ್ಗಾಂಬಾ ಬಸ್ಸಿನ ನಿರ್ವಾಹಕರ ನಿರ್ಲಕ್ಷದಿಂದ ಎದೆನೋವು ಜಾಸ್ತಿಯಾಗಿ ಹೃದಯಾಘಾತ ದಿಂದ ಮಾರ್ಗ ಮಧ್ಯದಲ್ಲೇ ಅಸುನೀಗಿದ್ದಾನೆ’ ಎಂದು ಮನವಿಯಲ್ಲಿ ಸುಮ ಮಯ್ಯ ಹೇಳಿಕೊಂಡಿದ್ದಾರೆ.
ಮಗ ಮೊಬೈಲ್ ಕರೆ ಸ್ವೀಕರಿಸದಿದ್ದಾಗ ತಾನು ಬಸ್ ಕಚೇರಿಗೆ ಕರೆ ಮಾಡಿದ್ದು, ಅಲ್ಲಿಯ ಸಿಬ್ಬಂದಿ ಸರಿಯಾಗಿ ಸ್ಪಂದಿಸಿಲ್ಲ. ಅದೇ ರೀತಿ ಬಸ್ ನಿರ್ವಾಹಕ ಕೂಡ ನಮ್ಮ ಕರೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಾನು ನನ್ನ ಮಗನನ್ನು ಕಳೆದುಕೊಂಡಿದ್ದೇನೆ. ನನಗಾದ ನೋವು, ಅನ್ಯಾಯ ಇನ್ನೂ ಯಾವ ತಾಯಿಗೂ ಆಗಬಾರದು. ಆದುದರಿಂದ ನನ್ನ ಮಗನ ಸಾವಿನ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೀರೆಂದು ನಂಬಿದ್ದೇನೆ’ ಎಂದು ಸುಮ ಮಯ್ಯ ಮನಯಲ್ಲಿ ಜಿಲ್ಲಾಧಿಕಾರಿಯನ್ನು ಕೋರಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಬಂದ ಈ ಮನವಿಯನ್ನು ಓದಿ, ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿ, ಮೃತರ ತಾಯಿ ಸುಮ ದೂರು ನೀಡಿದ್ದಲ್ಲಿ ತಕ್ಷಣ ಕ್ರಮ ಜರಗಿಸಲಾಗುವುದು ಎಂದು ಪ್ರತಿಕ್ರಿಯಿಸಿದರು. ಬಳಿಕ ಕರೆ ಮಾಡಿದ ಸುಮ ಅವರಿಗೆ ಧೈರ್ಯ ತುಂಬಿದ ಡಿಸಿ, ಕ್ರಮದ ಭರವಸೆಯನ್ನು ನೀಡಿದರು.
''ಸಾಮಾಜಿಕ ಜಾಲತಾಣದ ಮೂಲಕ ಸುಹಾಸ್ ತಾಯಿ ಸುಮಾ ಅವರ ಮನವಿ ಓದಿದ್ದೇನೆ. ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡುವಂತೆ ಅವರಿಗೆ ಸೂಚಿಸಿದ್ದೇನೆ. ತನಿಖೆಯಲ್ಲಿ ಬಸ್ ಸಿಬ್ಬಂದಿಯ ನಿರ್ಲಕ್ಷ ಕಂಡು ಬಂದರೆ ಕ್ರಮ ತೆಗೆದು ಕೊಳ್ಳಲಾಗುವುದು. ಅದೇ ರೀತಿ ಶೀಘ್ರದಲ್ಲೇ ಬಸ್ ಮಾಲಕರ ಸಭೆ ಕರೆದು, ಪ್ರಯಾಣಿಕರ ಹಿತದೃಷ್ಠಿಯಿಂದ ತೆಗೆದು ಕೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಲಾಗುವುದು. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸುವಂತೆ ಮಾಲಕರಿಗೆ ಸೂಚನೆ ನೀಡಲಾಗುವುದು''.
-ಜಿ.ಜಗದೀಶ್, ಜಿಲ್ಲಾಧಿಕಾರಿ, ಉಡುಪಿ ಜಿಲ್ಲೆ
ಜಿಲ್ಲಾಧಿಕಾರಿಗಳಿಗೆ ಸಾಮಾಜಿಕ ಜಾಲತಾಣಗಳ ಮೂಲಕ ತಾಯಿಯ ಮನವಿ ದೊರೆತಿದ್ದು, ಡಿಸಿಯ ಸೂಚನೆಯಂತೆ ಕುಂದಾಪುರ ಪೊಲೀಸ್ ನಿರೀಕ್ಷಕರು, ಮೃತರ ತಾಯಿ ಯನ್ನು ಸಂಪರ್ಕಿಸಿ ದೂರು ನೀಡಲು ತಿಳಿಸಿದ್ದಾರೆ. ಅದಕ್ಕೆ ಅವರ ತಾಯಿ ಮೂರು ನಾಲ್ಕು ದಿನ ಬಿಟ್ಟು ಬಂದು ದೂರು ನೀಡುವುದಾಗಿ ಹೇಳಿದ್ದಾರೆ. ಮುಂದೆ ತಾಯಿ ನೀಡುವ ದೂರನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು
-ವಿಷ್ಣುವರ್ಧನ್, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ.







