ಜಿಲ್ಲೆಯಲ್ಲಿ 370 ಜನರ ಮೇಲೆ ನಿಗಾ: ಕಲಬುರಗಿ ಜಿಲ್ಲಾಧಿಕಾರಿ ಶರತ್
ಅಘೋಷಿತ ಬಂದ್ ತಿಂಗಳವರೆಗೆ ಮುಂದುವರಿಯುವ ಸಾಧ್ಯತೆ

ಕಲಬುರಗಿ, ಮಾ.16: ಕಲಬುರಗಿಯ ಮೃತ ವ್ಯಕ್ತಿಯ ಸಂಪರ್ಕ ಹೊಂದಿದ್ದ ಇಬ್ಬರು ವ್ಯಕ್ತಿಗಳು ಹಾಗೂ ವಿದೇಶದಿಂದ ಬಂದ ಇಬ್ಬರು ವ್ಯಕ್ತಿಗಳು ಸೇರಿ ಹೊಸದಾಗಿ 4 ಜನರು ಚಿಕಿತ್ಸೆಗೆ ದಾಖಲಾಗಿದ್ದು, ಅವರ ಗಂಟಲು ದ್ರವ್ಯದ ಸ್ಯಾಂಪಲ್ಸ್‌ಗಳನ್ನು ಕೊರೋನ ವೈರಸ್ ಸೋಂಕು ಪರೀಕ್ಷೆಗೆ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಹೇಳಿದರು.
ಸೋಮವಾರ ಇಲ್ಲಿನ ವಾರ್ತಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಲಬುರಗಿ ಇ.ಎಸ್.ಐ.ಸಿ ಮೆಡಿಕಲ್ ಕಾಲೇಜಿನಲ್ಲಿ ಈ ಹಿಂದಿನ ಮೂರು ನೆಗೆಟಿವ್, ಒಂದು ಪಾಸಿಟಿವ್ ರೋಗಿ ಹಾಗೂ ಹೊಸದಾಗಿ ಕೊರೋನ ವೈರಸ್ ಲಕ್ಷಣದ ಹಿನ್ನೆಲೆಯಲ್ಲಿ ದಾಖಲಾದ 4 ರೋಗಿಗಳು ಸೇರಿದಂತೆ ಒಟ್ಟು 8 ಜನರಿಗೆ ಪ್ರತ್ಯೇಕವಾಗಿ ಐಸೋಲೇಷನ್ ವಾರ್ಡ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮೃತ ವ್ಯಕ್ತಿಯ ಸಂಬಂಧಿಕರೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಈ ಹಿಂದೆ ಗುರುತಿಸಿದ 71 ವ್ಯಕ್ತಿಗಳ ಜೊತೆಗೆ ಎರಡನೇ ಸಂಪರ್ಕ ಹೊಂದಿದ 238 ವ್ಯಕ್ತಿಗಳನ್ನು ಹಾಗೂ ವಿದೇಶದಿಂದ ಮರಳಿದ 61 ವ್ಯಕ್ತಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 370 ಜನರ ಮೇಲೆ ನಿಗಾ ವಹಿಸಿದೆ. 370 ಜನರಲ್ಲಿ ಎಂಟು ಜನರು ಐಸೋಲೇಷನ್ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದವರು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ ಎಂದರು.
ಕಲಬುರಗಿಯ ಜಿಮ್ಸ್ ಆಸ್ಪತೆಯಲ್ಲಿ 12 ಮತ್ತು ಇ.ಎಸ್.ಐ.ಸಿ.ನಲ್ಲಿ 50 ಐಸೋಲೇಷನ್ ವಾರ್ಡ್‌ಗಳಿವೆ. ಇದರ ಜೊತೆಯಲ್ಲಿ 200 ಕ್ವಾರಂಟೈನ್ ವಾರ್ಡ್ ಸಹ ಇದ್ದು, ಇಲ್ಲಿ ರೋಗಿಗಳಿಗೆ ಹೋಂ ಕ್ವಾರಂಟೈನ್‌ನಲ್ಲಿಟ್ಟು ತೀವ್ರ ನಿಗಾ ವಹಿಸುವ ಎಲ್ಲಾ ಸೌಲಭ್ಯವಿದೆ. ಇದಲ್ಲದೆ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಲ್ಲಿ 5 ಐಸೋಲೇಷನ್ ವಾರ್ಡ್ ಸ್ಥಾಪಿಸಿದೆ ಎಂದು ಶರತ್ ಬಿ. ಅವರು ಮಾಹಿತಿ ನೀಡಿದರು. ಅಲ್ಲದೆ ಕಲಬುರಗಿ ರೈಲು ನಿಲ್ದಾಣ, ವಿಮಾನ ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿಯೂ ಸಹ ತಪಾಸಣೆ ಜಾರಿಯಲ್ಲಿದೆ ಎಂದರು.
ಒಂದು ತಿಂಗಳು ಬಂದ್ ಸಾಧ್ಯತೆ: ಕೊರೋನಾ ವೈರಸ್ ಸೊಂಕಿನಿಂದ ಕಲಬುರಗಿ ವ್ಯಕ್ತಿ ನಿಧನ ಹೊಂದಿದ್ದರಿಂದ ಮತ್ತು ಈಗಾಗಲೆ ರಾಜ್ಯದಾದ್ಯಂತ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಆಗಿರುವುದರಿಂದ ಪ್ರಸ್ತುತ ಒಂದು ವಾರಗಳ ಕಾಲ ಜಿಲ್ಲೆಯಾದ್ಯಂತ ಅಘೋಷಿತ ಬಂದ್ ಜಾರಿಯಲ್ಲಿದೆ. ಇದು ಮುಂದಿನ ಒಂದು ತಿಂಗಳವರೆಗೆ ಮುಂದುವರೆಯುವ ಸಾಧ್ಯತೆ ಇದ್ದು, ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ವಾರ್ಡ್ ನಂ-30ರಲ್ಲಿ ಸ್ಕ್ರೀನಿಂಗ್: ಕೊರೋನಾ ವೈರಸ್ ಸೊಂಕಿನಿಂದ ನಿಧನ ಹೊಂದಿದ ಕಲಬುರಗಿ ವ್ಯಕ್ತಿ ವಾಸದ ವಾರ್ಡ್ ನಂಬರ್ 30ನ್ನು ಕಂಟೇನ್ಮೆಂಟ್ ಝೋನ್ ಎಂದು ಪರಿಗಣಿಸಲಾಗಿರುವ ಹಿನ್ನೆಲೆಯಲ್ಲಿ ಇಲ್ಲಿ ಆರೋಗ್ಯ ಇಲಾಖೆಯ ಸರ್ವೆಲೆನ್ಸ್ ತಂಡಗಳು 3 ಸಾವಿರ ಮನೆಗಳನ್ನು ಗುರುತಿಸಿದ್ದು, ಇಲ್ಲಿ ಅರಿವು ಮೂಡಿಸುವ ಹಾಗೂ ಸ್ಕ್ರೀನಿಂಗ್ ಕಾರ್ಯಕ್ರಮ ಮುಂದುವರೆದಿದೆ ಎಂದರು.
ಸಹಾಯವಾಣಿ ಸ್ಥಾಪನೆ: ಕೊರೋನ ವೈರಸ್ ಕುರಿತಂತೆ 24 ಗಂಟೆ ಸಹಾಯವಾಣಿ ತೆರೆಯಲಾಗಿದೆ. ಸಹಾಯವಾಣಿ ಸಂಖ್ಯೆ 08472-278604/ 278677 ಇರುತ್ತದೆ.
ಮೂರು ಮೆಡಿಕಲ್ ಸ್ಟೋರ್ ಸೀಝ್: ಮಾಸ್ಕ್ ಮತ್ತು ಸ್ಯಾನಿಟೈಜರ್‌ಗಳನ್ನು ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ರವಿವಾರ 11 ಮೆಡಿಕಲ್ ಅಂಗಡಿಗಳ ಮೇಲೆ ಅಧಿಕಾರಿಗಳ ತಂಡ ದಾಳಿ ಮಾಡಿದ್ದು, ತಪಾಸಣೆ ವೇಳೆ ಹೆಚ್ಚಿನ ದರಕ್ಕೆ ಮಾರುತ್ತಿದ್ದ 3 ಮೆಡಿಕಲ್‌ಗಳನ್ನು ಸೀಝ್ ಮಾಡಲಾಗಿದೆ. ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಯಾರಾದರೂ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದು ಕಂಡುಬಂದಲ್ಲಿ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ.
ಕೊರೋನಾ ವೈರಸ್ ಭೀತಿಯ ನಡುವೆ ಕಲಬುರಗಿ ಜಿಲ್ಲೆಗೆ ವಿವಿಧ ದೇಶಗಳಿಂದ ಇದುವರೆಗೆ 61 ಜನರು ಮರಳಿ ಬಂದಿರುವ ಮಾಹಿತಿ ಲಭ್ಯವಾಗಿದ್ದು, ಅವರೆಲ್ಲರ ಮೇಲೆ ನಿಗಾ ಇರಿಸಲಾಗಿದೆ. ವಿದೇಶದಿಂದ ಬಂದವರು ನಮಗೆ ಮಾಹಿತಿ ನೀಡಿಲ್ಲ. ನಮ್ಮ ಅಧಿಕಾರಿಗಳ ತಂಡವೇ ಈ ಮಾಹಿತಿ ಕಲೆಹಾಕಿದ್ದು, ತದನಂತರ ಅವರನ್ನು ಸಂಪರ್ಕಿಸಿ ಹೋಂ ಐಸೋಲೇಷನ್‌ನಲಿಟ್ಟು ನಿಗಾ ಇಡಲಾಗಿದೆ ಎಂದರು.
ವಿದೇಶದಿಂದ ಮರಳಿದರೆ ಮಾಹಿತಿ ಕೊಡಿ: ಸ್ಥಳೀಯ ವ್ಯಕ್ತಿ ಅಥವಾ ಹೊಸದಾಗಿ ಯಾರೇ ಹೊರದೇಶದಿಂದ ಮರಳಿ ಕಲಬುರಗಿ ಜಿಲ್ಲೆಗೆ ಬಂದಲ್ಲಿ ಸ್ವಯಂಪ್ರೇರಿತರಾಗಿ ಆವರು ಮಾಹಿತಿ ನೀಡುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು. ಒಂದು ವೇಳೆ ಮಾಹಿತಿ ನೀಡದಿದ್ದಲ್ಲಿ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 08472-278604/ 278677 ಗೆ ಕರೆ ಮಾಡಿ ಮಾಹಿತಿ ನೀಡಬಹುದು. ತಕ್ಷಣವೇ ಆರೋಗ್ಯ ಇಲಾಖೆಯ ತಂಡ ಸ್ಥಳಕ್ಕೆ ಆಗಮಿಸಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಪಿ.ರಾಜಾ, ಡಿ.ಸಿ.ಪಿ ಕಿಶೋರ ಬಾಬು, ಮಹಾನಗರ ಪಾಲಿಕೆಯ ಆಯುಕ್ತ ರಾಹುಲ ಪಾಂಡ್ವೆ ಇದ್ದರು.







