ಮಂಗಳೂರು: ಫ್ಲೆಕ್ಸ್‌ಗಳನ್ನು ಹರಿದು ಹಾಕಿದ ಪರಿಸರ ಹೋರಾಟಗಾರರು

ಮಂಗಳೂರು, ಮಾ.16: ನಗರದ ಕದ್ರಿ ಪಾರ್ಕ್ ಬಳಿ ಹೋರ್ಡಿಂಗ್ಸ್‌ಗೆ ಅಡ್ಡವಾಗುತ್ತಿದೆ ಎನ್ನುವ ನೆಪವೊಡ್ಡಿ ಗಿಡಗಳನ್ನು ಕಡಿದಿರುವುದಕ್ಕೆ ಆಕ್ರೋಶಗೊಂಡ ಪರಿಸರ ಹೋರಾಟಗಾರರು ಸೋಮವಾರ ರಾತ್ರಿ ಹಲವು ಫ್ಲೆಕ್ಸ್‌ಗಳನ್ನು ಹರಿದು ಹಾಕಿದ ಘಟನೆ ನಡೆದಿದೆ.
‘ಹೋರ್ಡಿಂಗ್‌ಗೆ ಅಡ್ಡವಾಗುತ್ತದೆ’ ಎಂದು ಕದ್ರಿ ಪಾರ್ಕ್ ಬಳಿ ಮೂರು ಮರಗಳ ಕೊಂಬೆಗಳನ್ನು ಕತ್ತರಿಸಲಾಗಿತ್ತು. ಇದರಿಂದ ಆಕ್ರೋಶಗೊಂಡ ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಎನ್‌ಇಸಿಎಫ್) ಕಾರ್ಯಕರ್ತರು ಅಲ್ಲೇ ಇದ್ದ ಎರಡು ಬೃಹತ್ ಜಾಹೀರಾತು ಫಲಕಗಳಿಗೆ ಅಳವಡಿಸಲಾಗಿರುವ ಫೆಕ್ಸ್‌ಗಳನ್ನು ಹರಿದು ಹಾಕಿದ್ದಾರೆ. ಜತೆಗೆ ಅಲ್ಲೇ ಪಕ್ಕದಲ್ಲಿದ್ದ ಅಳವಡಿಸಲಾಗಿದ್ದ ಇನ್ನೊಂದು ಶುಭಾಶಯ ಕೋರುವ ಫ್ಲೆಕ್ಸ್‌ನ ಮೇಲೂ ಪರಿಸರ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಮಂಗಳೂರಿನಲ್ಲಿ ಆರು ಫ್ಲೆಕ್ಸ್‌ಗಳನ್ನು ಹರಿದು ಹಾಕಲಾಗಿದ್ದು, ಫ್ಲೆಕ್ಸ್‌ನಲ್ಲಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಚಿತ್ರಕ್ಕೆ ಕಪ್ಪು ಬಣ್ಣ ಬಳಿದು ‘ಜೈ ನೇತ್ರಾವತಿ’ ಎಂಬುದಾಗಿ ಬರೆದಿದ್ದೇವೆ. ಯಾವೆಲ್ಲ ಫ್ಲೆಕ್ಸ್, ಜಾಹೀರಾತು ಫಲಕಗಳಲ್ಲಿ ಸಂಸದರ ಫೋಟೋ ಇದೆಯೋ ಅದಕ್ಕೆಲ್ಲ ಕಪ್ಪುಬಣ್ಣ ಬಳಿಯುತ್ತೇವೆ. ಅಲ್ಲದೆ, ಅನಧಿಕೃತ ಫ್ಲೆಕ್ಸ್ ಹಾಕಿಕೊಂಡು ಅನಗತ್ಯವಾಗಿ ಮರಗಳನ್ನು ಕಡಿದಿದ್ದವರ ಫ್ಲೆಕ್ಸ್‌ಗಳನ್ನೂ ಹರಿದು ಹಾಕಲಾಗುತ್ತಿದೆ’ ಎಂದು ಎನ್‌ಇಸಿಎಫ್ ಸಂಚಾಲಕ ಶಶಿಧರ ಶೆಟ್ಟಿ ತಿಳಿಸಿದ್ದಾರೆ.
‘ಎತ್ತಿನಹೊಳೆ ಯೋಜನೆಯನ್ನು ಆರಂಭದಲ್ಲಿ ವಿರೋಧಿಸಿ, ರಥಯಾತ್ರೆ ಮಾಡಿದ್ದ ಇದೇ ಸಂಸದ ನಳಿನ್‌ಕುಮಾರ್ ಕಟೀಲ್ ಅವರು ದೇವರು, ದೈವ, ನೇತ್ರಾವತಿ ನದಿಯ ಹೆಸರಲ್ಲಿ ಮತಪಡೆದು ಗೆದ್ದುಬಂದರು. ಈಗ ಕಮಿಷನ್ ಆಸೆಗೆ ಸಂಸದರು ಕೈಚಾಚಿರುವುದು ಖಂಡನೀಯ. ಇಂತಹ ಸಂಸದರು ನಮಗೆ ಬೇಕಿಲ್ಲ, ಅವರ ಫ್ಲೆಕ್ಸ್‌ಗಳು ಬೇಡವೇ ಬೇಡ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.









