ಕೊರೋನ ಪತ್ತೆಗೆ ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ಪ್ರಯೋಗಾಲಯ: ಆರೋಗ್ಯ ಸಚಿವ ಶ್ರೀರಾಮುಲು

ಬೆಂಗಳೂರು, ಮಾ.16: ಕೊರೋನ ವೈರಸ್‌ನ್ನು ಶೀಘ್ರವಾಗಿ ಪತ್ತೆ ಹಚ್ಚುವುದಕ್ಕಾಗಿ ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ವಿಶೇಷ ಪ್ರಯೋಗಾಲಯ ಹಾಗೂ ವಿಶೇಷ ವಾರ್ಡ್‌ಗಳನ್ನು ಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ.
ಸೋಮವಾರ ವಿಧಾನಪರಿಷತ್‌ನಲ್ಲಿ ನಿಯಮ 68ರಡಿಯಲ್ಲಿ ನಡೆದ ಚರ್ಚೆಯ ನಂತರ ಮಾತನಾಡಿದ ಅವರು, ಈಗ ಬೆಂಗಳೂರಿನಲ್ಲಿ ಮೂರು, ಶಿವಮೊಗ್ಗ, ಹಾಸನ ಸೇರಿದಂತೆ ಕೆಲವು ಕಡೆ ಮಾತ್ರ ಇದೆ. ಇನ್ನು ಹತ್ತು ದಿನದ ಒಳಗೆ ಪ್ರತಿ ಜಿಲ್ಲಾಸ್ಪತ್ರೆಗಳಲ್ಲಿ ವಿಶೇಷ ಪ್ರಯೋಗಾಲಯವನ್ನು ತೆರೆಯಲಾಗುವುದು ಎಂದು ತಿಳಿಸಿದರು.
ಈಗಾಗಲೇ ರಾಜ್ಯದ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಕೊರೋನ ರೋಗ ಲಕ್ಷಣಗಳನ್ನು ಪತ್ತೆ ಮಾಡುವಂತಹ ಥರ್ಮಲ್ ಸ್ಕಾನರ್‌ಗಳಿವೆ. ಅದನ್ನು ರಾಜ್ಯದ ಎಲ್ಲ ರೈಲ್ವೆ ನಿಲ್ದಾಣ, ಪ್ರಮುಖ ಬಸ್ ನಿಲ್ದಾಣಗಳಲ್ಲೂ ಅಳವಡಿಸುವಂತಹ ನಿಟ್ಟಿನಲ್ಲಿ 10 ಸಾವಿರ ಥರ್ಮಲ್ ಸ್ಕಾನರ್‌ಗಳನ್ನು ತರಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ದುಬಾರಿ ಬೆಲೆಕೊಟ್ಟರೂ ಮಾಸ್ಕ್‌ಗಳು ಸಿಗುತ್ತಿಲ್ಲ ಎಂದು ಸದನದಲ್ಲಿ ಬಹುತೇಕ ಸದಸ್ಯರು ಆರೋಪಿಸಿದಾಗ, ಮೂರು ತಿಂಗಳಿಗಾಗುವಷ್ಟು ಮಾಸ್ಕ್‌ಗಳು ಲಭ್ಯವಿದೆ. ಖಾಸಗಿ ಮೆಡಿಕಲ್ ಶಾಪ್‌ಗಳಲ್ಲಿ ಮಾಸ್ಕ್‌ಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡುವುದು ಕಂಡು ಬಂದರೆ, ಆ ಮೆಡಿಕಲ್‌ಗಳ ಪರವಾನಿಗೆಯನ್ನು ರದ್ದು ಪಡಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಇಟಲಿ ಸೇರಿದಂತೆ ವಿದೇಶಗಳಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಬರಮಾಡಿಕೊಳ್ಳುವ ನಿಟ್ಟಿನಲ್ಲಿ ವಿದೇಶಾಂಗ ಸಚಿವ, ವಿದೇಶಗಳಲ್ಲಿರುವ ಭಾರತದ ರಾಯಭಾರಿ ಕಚೇರಿಗಳ ಜೊತೆ ನಿಕಟ ಸಂಪರ್ಕದಲ್ಲಿದ್ದು, ಹಂತ ಹಂತವಾಗಿ ಎಲ್ಲರನ್ನು ಕರೆಸಿಕೊಳ್ಳಲಾಗುವುದು ಎಂದು ಅವರು ಹೇಳಿದರು.
ಖಾಸಗಿ ಆಸ್ಪತ್ರೆಗಳ ಸಹಕಾರ ಅಗತ್ಯ: ಕೊರೋನ ವೈರಸ್‌ನಿಂದ ರಾಜ್ಯದ ಜನತೆಯನ್ನು ಮುಕ್ತಗೊಳಿಸಬೇಕಾದರೆ ಕೇವಲ ರಾಜ್ಯ ಸರಕಾರ ಹಾಗೂ ಸರಕಾರಿ ಆಸ್ಪತ್ರೆಗಳಿಂದ ಮಾತ್ರ ಸಾಧ್ಯವಿಲ್ಲ. ಇಲ್ಲಿನ ಖಾಸಗಿ ಆಸ್ಪತ್ರೆಗಳ ಸಹಕಾರ ಅತ್ಯಗತ್ಯವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ದಾಖಲಾಗುವುದು ರೋಗಿಗಳಲ್ಲಿ ಯಾರಿಗಾದರು ಕೊರೋನ ಸೋಂಕು ಕಂಡುಬಂದರೆ, ಕೂಡಲೇ ಸರಕಾರಕ್ಕೆ ಮಾಹಿತಿ ಕೊಡುವಂತಹ ಕೆಲಸವಾಗಬೇಕಿದೆ ಎಂದು ಅವರು ಮನವಿ ಮಾಡಿದರು.
ಕೊರೋನ ವೈರಸನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ವೈದ್ಯಾಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೊರೋನ ವೈರಸ್ ಕುರಿತು ಚಿಕಿತ್ಸೆ, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಹಣಕಾಸಿನ ಕೊರತೆಯಿಲ್ಲ. ಹೀಗಾಗಿ ರಾಜ್ಯದ ಜನತೆ ಅನಗತ್ಯವಾಗಿ ಆತಂಕ ಪಡುವ ಅಗತ್ಯವಿಲ್ಲವೆಂದು ಅವರು ಹೇಳಿದರು.







