ಕೊರೋನ ವೈರಸ್ ಭೀತಿ: ಅಧಿವೇಶನ ಮೊಟಕು ಸಾಧ್ಯತೆ

ಬೆಂಗಳೂರು, ಮಾ. 16: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ಭೀತಿ ಹಿನ್ನೆಲೆಯಲ್ಲಿ ವಿಧಾನ ಮಂಡಲ ಅಧಿವೇಶನ ಮೊಟಕುಗೊಳಿಸುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮಾ.2ರಿಂದ ಆರಂಭವಾಗಿರುವ ವಿಧಾನ ಮಂಡಲ ಅಧಿವೇಶನ ಮಾ.31ರ ವರೆಗೂ ನಡೆಯಬೇಕಿದೆ. ಆದರೆ, ರಾಜ್ಯದಲ್ಲಿ ಕೊರೋನ ವೈರಸ್ ಸೋಂಕು ಭೀತಿ ಆವರಿಸಿದ್ದು, ನಿಗದಿತ ಅವಧಿಗಿಂತ ಒಂದು ವಾರ ಮೊದಲೇ ಅಧಿವೇಶನ ಮೊಟಕು ಮಾಡಲು ಸರಕಾರ ಚಿಂತನೆ ನಡೆಸಿದೆ ಎಂದು ಗೊತ್ತಾಗಿದೆ.
ಈಗಾಗಲೇ ಮುನ್ನೆಚ್ಚರಿಕೆ ಕ್ರಮವಾಗಿ ಒಂದೆಡೆ ಜನ ಸೇರುವ ಸಭೆ, ಸಮಾರಂಭ, ಮದುವೆ ಕಾರ್ಯಕ್ರಮಗಳು, ಜಾತ್ರೆಗಳನ್ನು ಮುಂದೂಡಲಾಗಿದೆ. ಅದೇ ರೀತಿ ವಿಧಾನಸೌಧದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಜನ ಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಸಾಧ್ಯತೆಯಿಂದ ಸೋಂಕು ಹರಡುವ ಭೀತಿ ಆವರಿಸಿದೆ.
ಹೀಗಾಗಿ ವೈರಾಣು ಹರಡದಂತೆ ಸಾಕಷ್ಟು ಮುನ್ನೆಚ್ಚರಿಕೆ ಕೈಗೊಂಡಿದ್ದರೂ, ನಿಯಂತ್ರಣ ಸುಲಭವಲ್ಲ. ಹೀಗಾಗಿ ಅಧಿವೇಶನವನ್ನು ಅವಧಿಗಿಂತ ಮೊದಲೇ ಮೊಟಕುಗೊಳಿಸುವ ಸಾಧ್ಯತೆಗಳಿವೆ. ಬಜೆಟ್ ಅನುಮೋದನೇ ಪಡೆದು ಉಭಯ ಸದನವನ್ನು ಅನಿದಿರ್ಷ್ಟಾವಧಿಗೆ ಮುಂದೂಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸಾರ್ವಜನಿಕರ ಪ್ರವೇಶ ನಿರ್ಬಂಧ
ಕೊರೋನ ವೈರಸ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನಾಳೆ(ಮಾ.17) ವಿಧಾನಸಭಾ ಅಧಿವೇಶನ ಕಲಾಪ ವೀಕ್ಷಣೆಗೆ ಸಾರ್ವಜನಿಕರ ಪ್ರವೇಶಕ್ಕೆ ಮಾ.20ರ ವರೆಗೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಶಾಸಕರು ಸಾರ್ವಜನಿಕರಿಗೆ ಪಾಸ್ ನೀಡಬಾರದು’
-ವಿಶ್ವೇಶ್ವರ ಹೆಗಡೆ ಕಾಗೇರಿ, ಸ್ಪೀಕರ್







