ಮೈಸೂರಿನಲ್ಲಿ ಕೊರೋನ ವೈರಸ್ ಪತ್ತೆಯಾಗಿಲ್ಲ: ಜಿಲ್ಲಾಧಿಕಾರಿ

ಮೈಸೂರು, ಮಾ.16: ಕೊರೋನ ಸೋಂಕು ಸಂಬಂಧ ಮೈಸೂರು ಜಿಲ್ಲೆಯಲ್ಲಿ 107 ಜನರ ಸ್ಕ್ರೀನಿಂಗ್ ಮಾಡಲಾಗಿದೆ. ಈ ಪೈಕಿ 52 ಜನರನ್ನು ಮನೆಯಲ್ಲಿರಿಸಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಕೊರೋನ ವೈರಸ್ ಭೀತಿ ಹಿನ್ನೆಲೆ 107 ಜನರ ಸ್ಕ್ರೀನಿಂಗ್ ಮಾಡಲಾಗಿದ್ದು, ಈ ಪೈಕಿ 54 ಜನರನ್ನು ಮನೆಯಲ್ಲಿರಿಸಿ ನಿಗಾ ವಹಿಸಿದ್ದ ನಿಗದಿತ ಸಮಯ ಮುಗಿದಿದೆ. ಓರ್ವ ವ್ಯಕ್ತಿ ಆಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿದ್ದಾರೆ. ಆ ವ್ಯಕ್ತಿಗೆ ಕೊರೋನಾ ಸೋಂಕು ತಗುಲಿಲ್ಲ. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಅವರ ರಕ್ತ ಹಾಗೂ ಗಂಟಲು ದ್ರವದ ಪರೀಕ್ಷೆ ಮಾಡಲಾಗಿದ್ದು, ಪರೀಕ್ಷಾ ವರದಿ ಬರಬೇಕಾಗಿದೆ. 8 ವ್ಯಕ್ತಿಗಳ ಗಂಟಲು ದ್ರವದ ಪರೀಕ್ಷೆ ಮಾಡಲಾಗಿದ್ದು, 8 ರಲ್ಲಿ 7 ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಈ ನಡುವೆ ಮೈಸೂರು ಜಿಲ್ಲೆಯಲ್ಲಿ ಇಲ್ಲಿಯವರೆಗೂ ಒಂದೇ ಒಂದು ಕೊರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ ಎಂದು ಮಾಹಿತಿ ನೀಡಿದರು.
ದೇಶಾದ್ಯಂತ ಕೊರೋನಾ ಶಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆ ಜಿಲ್ಲೆಯಾದ್ಯಂತ ಸೆಕ್ಷನ್ 144 ಜಾರಿ ಮಾಡಲಾಗಿದೆ. ಅದರಲ್ಲೂ ನೆರೆಯ ಮಹಾರಾಷ್ಟ್ರದಲ್ಲಿ ಕೊರೋನಾ ಶಂಕಿತರ ಸಂಖ್ಯೆ ಹೆಚ್ಚಳವಾಗುತ್ತಿರುವುದರಿಂದ ಮೈಸೂರು ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಮೈಸೂರು ಜಿಲ್ಲೆಯಾದ್ಯಂತ ಸಭೆ, ಸಮಾರಂಭ, ಸಾಮೂಹಿಕ ವಿವಾಹ, ಜಾತ್ರಾಮಹೋತ್ಸವ, ದೇವರ ಉತ್ಸವಗಳನ್ನು ನಡೆಸುವಂತಿಲ್ಲ. ದೇಗುಲಗಳಲ್ಲಿ ಪ್ರಸಾದ ವಿತರಣೆಗೂ ನಿರ್ಬಂಧ ವಿಧಿಸಲಾಗಿದೆ. ಆದರೆ ದೇಗುಲಗಳಲ್ಲಿ ಪ್ರತಿನಿತ್ಯ ನಡೆಯುವ ಪೂಜಾವಿಧಿಗಳಿಗೆ ನಿರ್ಬಂಧ ಇಲ್ಲ. ದೇಗುಲಗಳಲ್ಲಿ ಹೆಚ್ಚಿನ ಜನಸಂದಣಿ ಸೇರದಂತೆ ನೋಡಿಕೊಳ್ಳಬೇಕು. ರಾಜ್ಯ ಸರ್ಕಾರದ ಮುಂದಿನ ಆದೇಶದವರೆಗೂ ನಿರ್ಬಂಧ ಅನ್ವಯ ಆಗಲಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಹೇಳಿದರು.
ಮೈಸೂರು ಜಿಲ್ಲೆಯ ಎಲ್ಲ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಸದ್ಯ ಮೈಸೂರಿನ ಕೆ.ಆರ್.ಆಸ್ಪತ್ರೆ, ಟಿ.ನರಸೀಪುರ ತಾಲೂಕು ಆಸ್ಪತ್ರೆ, ಹೆಚ್.ಡಿ.ಕೋಟೆ ತಾಲೂಕು ಆಸ್ಪತ್ರೆ, ಕೆ.ಆರ್.ನಗರ ತಾಲೂಕು ಆಸ್ಪತ್ರೆ, ಪಿರಿಯಾಪಟ್ಟಣ ತಾಲೂಕು ಆಸ್ಪತ್ರೆ, ಹುಣಸೂರು ತಾಲೂಕು ಆಸ್ಪತ್ರೆ,ನಂಜನಗೂಡು ತಾಲ್ಲೂಕು ಆಸ್ಪತ್ರೆಯಲ್ಲಿ 10 ಬೆಡ್ ನ ಐಸೋಲೇಷನ್ ವಾರ್ಡ್ ನಿರ್ಮಾಣ ಆಗಿದೆ. ಅಗತ್ಯವಿದ್ದರೆ ಮೈಸೂರಿನ ಅಪೋಲೋ, ಕೊಲಂಬಿಯಾ ಏಷಿಯಾ, ಜೆಎಸ್‍ಎಸ್, ವಿಕ್ರಮ್, ಸುಯೋಗ್ ಹಾಗೂ ಇತರೆ ದೊಡ್ಡ ಖಾಸಗಿ ಆಸ್ಪತ್ರೆಗೆ ಮನವಿ ಮಾಡಿದ್ದು 10 ಬೆಡ್‍ನ ಐಸೋಲೇಷನ್ ವಾರ್ಡ್ ಕಾಯ್ದಿರಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.







