150 ಸ್ಥಾನ ಗೆದ್ದರೂ ಸ್ಥಿರ ಸರಕಾರ ನೀಡುವ ಪರಿಸ್ಥಿತಿ ಇಲ್ಲ: ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಮಾ.16: ಮುಂದಿನ ದಿನಗಳಲ್ಲಿ 150 ಸ್ಥಾನಗಳನ್ನು ಗೆದ್ದರೂ ಸ್ಥಿರ ಸರಕಾರ ನೀಡುವ ಪರಿಸ್ಥಿತಿ ಇಲ್ಲ. ನಮ್ಮ ರಾಜ್ಯದಲ್ಲಿ ಆಗಿದ್ದೆ ಇನ್ನೂ ಒಂದೆರಡು ರಾಜ್ಯಗಳಲ್ಲಿ ಆಗುತ್ತಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಸೋಮವಾರ ವಿಧಾನಸಭೆಯಲ್ಲಿ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಮನಸ್ಸು ಮಾಡಿದ್ದರೆ ಬಿಜೆಪಿ ಶಾಸಕರನ್ನೆ ಖರೀದಿ ಮಾಡಿ ಸರಕಾರ ಉಳಿಸಿಕೊಳ್ಳಬಹುದಿತ್ತು. ಆದರೆ, ಬೇಡ ಎಂದು ಸುಮ್ಮನಾದೆವು ಎಂದರು.
ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದ್ದು ತಪ್ಪು ಎಂದಾದರೆ ಪಕ್ಷಾಂತರ ನಿಷೇಧ ಕಾಯ್ದೆ ಜಾರಿಗೆ ಬಂದಿರೋದಾದ್ರೂ ಏಕೆ? ಸ್ಪೀಕರ್ ಸ್ಥಾನದಲ್ಲಿ ಕೂತು ರಮೇಶ್ ಕುಮಾರ್ ಕೈಗೊಂಡ ತೀರ್ಪಿನ ಬಗ್ಗೆ ಸುಪ್ರೀಂಕೋರ್ಟ್ ಏನು ರಿಮಾರ್ಕ್ ಮಾಡಿದೆ ಎಂದು ಅವರು ಪ್ರಶ್ನಿಸಿದರು.
ರಮೇಶ್ ಕುಮಾರ್ ಕೈಗೊಂಡ ತೀರ್ಮಾನದ ಬಗ್ಗೆ ಸುಧಾಕರ್ ಇಲ್ಲಿ ಚರ್ಚೆ ಮಾಡುತ್ತಾರೆ. ಅದರ ಅಗತ್ಯವೇ ಇರಲಿಲ್ಲ. ಅದು ಮುಗಿದು ಹೋದ ಕತೆ. 2010ರಲ್ಲಿ ಬಿಜೆಪಿ ಶಾಸಕರನ್ನು ಅನರ್ಹಗೊಳಿಸಿದ ಸಂದರ್ಭದಲ್ಲಿ ಇದೇ ವಿಧಾನಸಭೆಯಲ್ಲಿ ಏನೆಲ್ಲಾ ಘಟನಾವಳಿಗಳಾದವು ಎಂದು ಅವರು ಹೇಳಿದರು. ಗೂಳಿಹಟ್ಟಿ ಶೇಖರ್ ಮೇಜಿನ ಮೇಲೆ ಹತ್ತಿ ನಿಂತು ಅಂಗಿ ಹರಿದುಕೊಂಡಿದ್ದನ್ನು ನಾವು ನೋಡಿದ್ದೇವೆ. ರಾಜಕೀಯ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪ್ರಜಾಪ್ರಭುತ್ವ ಹೇಗೆ ಉಳಿಯಲು ಸಾಧ್ಯ. ಅಂತಹ ಕೆಟ್ಟ ಪರಿಸ್ಥಿತಿಯನ್ನು ನಾವೆ ಸೃಷ್ಟಿ ಮಾಡಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದರು. ನಾನು ಅಧಿಕಾರದಿಂದ ಕೆಳಗಿಳಿದರೂ ನನ್ನ ಮನೆಯ ಬಳಿ ಜನ ಬರುತ್ತಿದ್ದಾರೆ. ಎಸ್ಟಿ ವರ್ಗದ ವಾಲ್ಮೀಕಿ ಸಮುದಾಯದ ಹೆಣ್ಣು ಮಗಳು ತನ್ನ ಕುಟುಂಬಕ್ಕಾಗಿ ಕಿಡ್ನಿ ಮಾರಲು ಮುಂದಾಗಿದ್ದರು. ಇಂತಹ ಪರಿಸ್ಥಿತಿ ಇದೆ ಎಂದು ಅವರು ಹೇಳಿದರು.
ನನ್ನ ಗ್ರಾಮ ವಾಸ್ತವ್ಯದ ಬಗ್ಗೆ ಮೇಲ್ಮನೆಯಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಲಘುವಾಗಿ ಮಾತಾಡಿದ್ದಾರೆ. ಯಾರೂ ಕೂಡ ಗ್ರಾಮ ವಾಸ್ತವ್ಯದ ಬಗ್ಗೆ ಲಘುವಾಗಿ ಮಾತನಾಡಬಾರದು. ಗ್ರಾಮ ವಾಸ್ತವ್ಯವನ್ನು ಮಹಾತ್ಮ ಗಾಂಧಿಯವರ ಆದರ್ಶದಿಂದ ಅಳವಡಿಸಿಕೊಂಡಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ಸಂವಿಧಾನ ಕರಡು ರಚನಾ ಸಮಿತಿ ಅಧ್ಯಕ್ಷರಾಗಿದ್ದ ರಾಜೇಂದ್ರ ಪ್ರಸಾದ್, ‘ಸಂವಿಧಾನ ಒಂದು ನಿರ್ಜೀವ ವಸ್ತು, ಆಡಳಿತ ನಡೆಸುವ ವ್ಯಕ್ತಿಗಳು ಅದಕ್ಕೆ ಜೀವ ತುಂಬ ಬೇಕು’ ಎಂಬ ಮಾತುಗಳನ್ನಾಡಿದ್ದರು. ಇವತ್ತಿಗೆ ಅವರ ಮಾತು ಎಷ್ಟು ಪ್ರಸ್ತುತವಾಗಿದೆ ಎಂದು ಅವರು ಹೇಳಿದರು.
ಸಂವಿಧಾನ ರಚನೆ ಆಗಿ 70 ವರ್ಷ ಕಳೆದರೂ ದೇವದಾಸಿ ಮಗಳೊಬ್ಬಳು ಉತ್ತಮ ಬದುಕು ಕಟ್ಟಿಕೊಳ್ಳಲು ಆಗುತ್ತಿಲ್ಲ. ಇನ್ನೂ ನಮ್ನ ಸಮಾಜ ಎಲ್ಲಿದೆ. ರಾಜ್ಯ ರಾಜಕೀಯದಲ್ಲಿ ಇತ್ತೀಚೆಗೆ ನಡೆದ ಬೆಳಣಿಗೆಗಳೆ ನೋಡಿ, ಪಕ್ಷಾಂತರ ನಮ್ಮ ಹಕ್ಕು ಎನ್ನುತ್ತಾರೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಕೊರೋನ ಹಾವಳಿಯಿಂದಾಗಿ ಜಿಎಸ್ಟಿ ಯಾವ ಹಂತಕ್ಕೆ ಬಂದು ತಲುಪತ್ತದೆಯೋ ಗೊತ್ತಿಲ್ಲ. ಇವತ್ತು ಬೆಳಗ್ಗೆ ಓಲಾ ಡ್ರೈವರ್‌ಗಳು ಬಂದು ನನ್ನನ್ನು ಭೇಟಿಯಾದರು. ಕೊರೋನದಿಂದಾಗಿ ಕಾರುಗಳನ್ನು ಚಲಾಯಿಸದೆ ನಿಲ್ಲಿಸಿದ್ದೇವೆ. ಬ್ಯಾಂಕ್‌ಗಳಿಂದ ವಾಹನಗಳ ಮೇಲೆ ಪಡೆದಿರುವ ಸಾಲದ ಕಂತು ಕಟ್ಟಲು ದುಡ್ಡಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದರು.
ಸಾಲ ತೀರಿಸದೆ ಹೋದರೆ ಕಾರನ್ನು ಜಪ್ತಿ ಮಾಡುತ್ತಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಇದೆ ಎಂದು ಚಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಅವರ ಸಮಸ್ಯೆಗಳಿಗೆ ಪರಿಹಾರ ನೀಡಲು ಬ್ಯಾಂಕ್‌ಗಳಿಗೆ ಸೂಚನೆ ನೀಡಿ ಎಂದು ಕುಮಾರಸ್ವಾಮಿ ಕೋರಿದರು.







