ಸಂಸತ್ತಿನಲ್ಲಿ ಅಂಗೀಕರಿಸಿದ ಕಾನೂನು ವಿರೋಧಿಸುವ ಅಧಿಕಾರ ನಮಗಿದೆ: ಸಿದ್ದರಾಮಯ್ಯ

ಬೆಂಗಳೂರು, ಮಾ.16: ಒಂದು ಸರಕಾರ ಸಂಸತ್ತಿನಲ್ಲಿ 543 ಸ್ಥಾನಗಳಿಗೆ 400 ಸ್ಥಾನಗಳನ್ನು ಹೊಂದಿದ್ದರೂ, ಸಂವಿಧಾನದ ವಿರುದ್ಧವಾಗಿ ನಡೆದುಕೊಂಡರೆ, ಅದನ್ನು ವಿರೋಧಿಸುವ ಅಧಿಕಾರ ನಮಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಸೋಮವಾರ ವಿಧಾನಸಭೆಯಲ್ಲಿ ನಡೆದ ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಂಸತ್ತಿನಲ್ಲಿ ಅಂಗೀಕರಿಸಿರುವ ಸಿಎಎ ಕಾನೂನು ನನ್ನ ಪ್ರಕಾರ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ ಎಂದರು.
ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸುವುದೆ ಪ್ರಜಾಪ್ರಭುತ್ವ. ಒಂದು ಕಾನೂನಿನ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೆ ಅದು ದೇಶದ್ರೋಹ ಹೇಗಾಗುತ್ತದೆ? ಹಾಗಾದರೆ, ವಾಕ್ ಸ್ವಾತಂತ್ರ, ಅಭಿವ್ಯಕ್ತಿ ಸ್ವಾತಂತ್ರ ಏಕಿರಬೇಕು? ಎಂದ ಅವರು, ಸಿಎಎ ವಿರೋಧಿಸುತ್ತಿವವರ ಬಗ್ಗೆ ನಡೆದುಕೊಳ್ಳುತ್ತಿರುವ ರೀತಿ ಪ್ರಜಾಪ್ರಭುತ್ವದಲ್ಲಿ ನೋಡಲು ಸಾಧ್ಯವಿಲ್ಲ. ಅದೇನಿದ್ದರೂ ನಿರಂಕುಶ ಪ್ರಭುತ್ವದಲ್ಲಿ ಕಾಣಬಹುದು ಎಂದರು.
ಈ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಧ್ಯಪ್ರವೇಶಿಸಿ, ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರಗೊಂಡಿರುವ ಕಾನೂನಿಗೆ ಮಾನ್ಯತೆ ಇಲ್ಲವೇ? ಅದನ್ನು ನೀವು ವಿರೋಧಿಸುತ್ತೀರಾ? ಎಂದರು.
ಇಷ್ಟ ಬಂದ ಹಾಗೆ ಕಾನೂನು ಮಾಡಲು ಸಂವಿಧಾನ ಅವಕಾಶ ಕೊಡಲ್ಲ. ನನಗೆ ವಿರೋಧ ಮಾಡಬೇಡಿ ಎಂದು ಹೇಳುತ್ತೀರಾ. ಹಾಗಿದ್ದಲ್ಲಿ, ಸುಪ್ರೀಂಕೋರ್ಟ್‌ನಲ್ಲಿ ಸಿಎಎ ಪ್ರಶ್ನಿಸಿ ಯಾಕೆ ಅರ್ಜಿಗಳು ಸಲ್ಲಿಕೆಯಾಗಿವೆ? ಸಂವಿಧಾನದಲ್ಲಿ ನಮಗೆ ಸಿಕ್ಕಿರುವ ಅವಕಾಶದಿಂದಾಗಿಯೇ ಸಿಎಎಎ ಅನ್ನು ಪ್ರಶ್ನಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
10 ರಾಜ್ಯ ಸರಕಾರಗಳು ಸಿಎಎ ಜಾರಿ ಮಾಡುವುದಿಲ್ಲ ಎಂದು ಹೇಳಿವೆ. ಬಿಹಾರದಲ್ಲಿ ಬಿಜೆಪಿ-ಜೆಡಿಯು ಸರಕಾರ ಅಧಿಕಾರದಲ್ಲಿದ್ದು, ಎನ್‌ಪಿಆರ್ ಜಾರಿ ಮಾಡುವುದಿಲ್ಲ ಎಂಬ ನಿರ್ಣಯ ತೆಗೆದುಕೊಂಡಿದೆ. ಸಿಎಎ ವಿರೋಧಿಸುವುದು ಅಪರಾಧವಾಗಿದ್ದರೆ ಈವರೆಗೆ 10 ಸರಕಾರಗಳನ್ನು ವಜಾ ಮಾಡಬೇಕಿತ್ತಲ್ಲವೇ? ಎಂದು ಅವರು ಪ್ರಶ್ನಿಸಿದರು.
ಸಂಸತ್ತಿನಲ್ಲಿ ರಚಿಸಲಾಗುವ ಕಾನೂನುಗಳನ್ನು ವಿರೋಧಿಸಬಾರದು ಎಂದು ಸಂವಿಧಾನದ ಯಾವ ಭಾಗದಲ್ಲಿ ಉಲ್ಲೇಖಿಸಲಾಗಿದೆ ಎಂಬುದನ್ನು ನನಗೆ ತೋರಿಸಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಕಾನೂನುಗಳನ್ನು ವಿರೋಧ ಮಾಡುವುದು ಬೇರೆ, ಅಭಿಪ್ರಾಯ ವ್ಯಕ್ತಪಡಿಸುವುದು ಬೇರೆ ಎಂದರು.
ಈ ಸಂದರ್ಭದಲ್ಲಿ ಆಡಳಿತ ಹಾಗೂ ಪ್ರತಿಪಕ್ಷದ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಆಗ ಮಧ್ಯಪ್ರವೇಶ ಮಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸುಪ್ರೀಂಕೋರ್ಟ್‌ನಲ್ಲಿ ಸಿಎಎ ಕುರಿತು ದಾಖಲಾಗಿರುವ ಅರ್ಜಿಗಳ ವಿಚಾರಣೆ ಪೂರ್ಣಗೊಂಡು ತೀರ್ಪು ಹೊರ ಬರುವವರೆಗೆ ಅದು ಈ ನೆಲದ ಕಾನೂನಾಗಿರುತ್ತದೆ ಎಂದು ಹೇಳಿ ಚರ್ಚೆಗೆ ಅಂತ್ಯ ಹಾಡಿದರು.







