ವಿಕ್ಟರ್ ಅಕ್ಸೆಲ್ಸೆನ್, ತೆ ಜು ಯಿಂಗ್‌ಗೆ ಕಿರೀಟ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್

ಬರ್ಮಿಂಗ್‌ಹ್ಯಾಮ್, ಮಾ.16: ಡೆನ್ಮಾರ್ಕ್‌ನ ವಿಕ್ಟರ್ ಅಕ್ಸೆಲ್ಸೆನ್ ಆಲ್ ಇಂಗ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ ಚೊಚ್ಚಲ ಕಿರೀಟ ಧರಿಸಿದರು.
ಮಹಿಳೆಯರ ಸಿಂಗಲ್ಸ್‌ನಲ್ಲಿ ಚೈನಾ ತೈಪೆಯ ಮಾಜಿ ಚಾಂಪಿಯನ್ ತೈ ಜು ಯಿಂಗ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.
ವಿಶ್ವದ ಎರಡನೇ ಶ್ರೇಯಾಂಕದ ಆಟಗಾರ ಅಕ್ಸೆಲ್ಸೆನ್ ಅವರು ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಚೀನಾದ ಮಾಜಿ ಚಾಂಪಿಯನ್ ಚೋವ್ ಟಿಯಾನ್ -ಚೆನ್ ವಿರುದ್ಧ 21-13, 21-14 ಗೇಮ್‌ಗಳ ಅಂತರದಲ್ಲಿ ಜಯ ಗಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು. ಮಾಜಿ ನಂ.1 ಆಟಗಾರ್ತಿ ತೈ ಜು, ಆಲ್ ಇಂಗ್ಲೆಂಡ್‌ನಲ್ಲಿ ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿದ್ದರು. ತೈ ಜು ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಚೀನಾದ ಚೆನ್ ಯು ಫೇ ವಿರುದ್ಧ 21-19, 21-15 ಅಂತರದಲ್ಲಿ ಜಯ ಸಾಧಿಸಿ 3ನೇ ಬಾರಿ ಪ್ರಶಸ್ತಿಯನ್ನು ಬಾಚಿಕೊಂಡರು.
ಈ ವರ್ಷ ನಡೆದ ಮೊದಲ ಸೂಪರ್ 1000 ವರ್ಲ್ಡ್ ಟೂರ್ನಮೆಂಟ್ ಇದಾಗಿದ್ದು, ಇದೀಗ ಕೊರೋನ ವೈರಸ್ ಸೋಂಕಿನ ಕಾರಣದಿಂದಾಗಿ ಬ್ಯಾಡ್ಮಿಂಟನ್ ವರ್ಲ್ಡ್ ಫೆಡರೇಶನ್(ಬಿಡಬ್ಲುಎಫ್) ಎಲ್ಲ ವರ್ಲ್ಡ್‌ಟೂರ್ ಮತ್ತು ನಿಗದಿಯಾಗಿದ್ದ ಎಲ್ಲ ಟೂರ್ನಮೆಂಟ್‌ಗಳನ್ನು ರದ್ದುಗೊಳಿಸಿದೆ. ಹೀಗಾಗಿ ಸದ್ಯಕ್ಕೆ ಇದು ಕೊನೆಯ ವರ್ಲ್ಡ್ ಟೂರ್ ಆಗಿದೆ. ಮಹಿಳೆಯರ ಡಬಲ್ಸ್‌ನಲ್ಲಿ ಜಪಾನ್‌ನ ಮೂರನೇ ಶ್ರೇಯಾಂಕದ ಯುಕಿ ಫುಕುಶಿಮಾ ಮತ್ತು ಸಯಾಕ ಹಿರೊಟಾ ಅವರು ಚೀನಾದ ಡು ಹುಯೆ ಮತ್ತುಲಿ ಯಿನ್ ಹ್ಯು ವಿರುದ್ಧ ಜಯ ಗಳಿಸಿ ಪ್ರಶಸ್ತಿ ಪಡೆದರು.
ಮಿಕ್ಸೆಡ್ ಡಬಲ್ಸ್‌ನಲ್ಲಿ ಇಂಡೋ ನೇಶ್ಯದ ಪ್ರವೀಣ್ ಜೊರ್ಡನ್ ಮತ್ತು ಮೆಲಾಟಿ ಡಾವಾ ಒಕ್ಟಾವಿಯಾಂಟಿ ಅವರು ಥಾಯ್ಲೆಂಡ್‌ನ ಡೆಚಾಪೊಲ್ ಪುವಾರನುಕ್ರೊ ಮತ್ತು ಸಾಪ್‌ಸ್ರೀ ಟಾರ್ಟೆನಾಚಚಾಯ್‌ರನ್ನು 21-15, 17-21, 21-8 ಅಂತರದಲ್ಲಿ ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.







