ಕೊರೋನ ಭೀತಿ: ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳ ಪ್ರವೇಶ ನಿಷೇಧಿಸಿದ ಜಿಲ್ಲಾಡಳಿತ

ಮಡಿಕೇರಿ, ಮಾ.16: ಕೊರೋನ ನಿಯಂತ್ರಣ ಹಿನ್ನೆಲೆಯಲ್ಲಿ ಬಳಕೆಯಾಗುವ ಮಾಸ್ಕ್ ಮತ್ತು ಕೈಗಳ ಶುದ್ಧೀಕರಣ ದ್ರಾವಣ (ಹ್ಯಾಂಡ್ ಸ್ಯಾನಿಟೈಸರ್)ವನ್ನು ಅಗತ್ಯ ವಸ್ತುಗಳ ಕಾಯ್ದೆಗೆ ಒಳಪಡಿಸಿ ನವದೆಹಲಿಯ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಆದೇಶ ಹೊರಡಿಸಿದೆ. ಅಗತ್ಯ ವಸ್ತುಗಳ ಕಾಯ್ದೆಗೆ ಒಳಪಟ್ಟ ಮಾಸ್ಕ್ ಮತ್ತು ಸ್ಯಾನಿಟೈಸರ್‍ಗಳನ್ನು ಅನಧಿಕೃತವಾಗಿ ದಾಸ್ತಾನು ಮಾಡುವುದು, ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಈ ಬಗ್ಗೆ ಯಾವುದೇ ದೂರುಗಳಿದ್ದಲ್ಲಿ ಪ್ರಭುಶಂಕರ್, ಶಿರಸ್ತೇದಾರ್, ಆಹಾರ ಇಲಾಖೆ, ಮಡಿಕೇರಿ ಮೊ.9972364303, ಗಜೇಂದ್ರ, ಲೀಗಲ್ ಮೆಟ್ರೋಲಜಿ ಇಲಾಖೆ ಮೊ.8310489425, 984515426 ನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದ್ದಾರೆ.
ಪ್ರವಾಸಿತಾಣಗಳ ಪ್ರವೇಶ ನಿರ್ಬಂಧ
ಕೊಡಗು ಜಿಲ್ಲೆಯ ವಿವಿಧ ಇಲಾಖೆಗಳ ಅಧೀನದಲ್ಲಿ ಬರುವ ಎಲ್ಲಾ ಪ್ರವಾಸಿ ಸ್ಥಳಗಳಿಗೆ ಪ್ರವಾಸಿಗರ ಮತ್ತು ಸಾರ್ವಜನಿಕರ ಪ್ರವೇಶವನ್ನು ಮಾ.21 ರವರೆಗೆ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಈ ನಡುವೆ ಕೊಡಗಿನ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ(ನಾಗರಹೊಳೆ)ಕ್ಕೆ ಪ್ರವಾಸಿಗರ ಪ್ರವೇಶವನ್ನು ಇಂದಿನಿಂದ ಮಾ.22 ರವರೆಗೆ ನಿರ್ಬಂಧಿಸಿ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
128 ಮಂದಿ ಹೋಂ ಕ್ವಾರಂಟೈನ್
ಜಿಲ್ಲೆಯಿಂದ ವಿದೇಶಗಳಿಗೆ ತೆರಳಿ ಹಿಂದಿರುಗಿರುವವರನ್ನು ಪತ್ತೆ ಹಚ್ಚಿ ತಪಾಸಣೆ ಮಾಡುವ ಕಾರ್ಯ ನಡೆಯುತ್ತಿದ್ದು, ಅದರಂತೆ ಇಂದು ಮಡಿಕೇರಿ ತಾಲೂಕಿನಲ್ಲಿ 56, ವೀರಾಜಪೇಟೆ ತಾಲೂಕಿನಲ್ಲಿ 31 ಮತ್ತು ಸೋಮವಾರಪೇಟೆ ತಾಲೂಕಿನಲ್ಲಿ 44 ಮಂದಿಯನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ 128 ಮಂದಿಯನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಅವರವರ ಮನೆಗಳಲ್ಲಿಯೇ ಸಂಪರ್ಕ ತಡೆ ( ಹೋಂ ಕ್ವಾರಂಟೈನ್)ಮಾಡಲಾಗಿದೆ. ಇದನ್ನು ಉಲ್ಲಂಘಿಸಿದ ಸಿದ್ದಾಪುರ ಗ್ರಾಮದ ಒಬ್ಬ ವ್ಯಕ್ತಿಗೆ ನೋಟಿಸ್ ನೀಡಲಾಗಿದೆ.
ಕೇರಳ ಗಡಿಯಲ್ಲಿ ತಪಾಸಣೆ
ಕೇರಳದ ಗಡಿ ಭಾಗದ ಪ್ರದೇಶಗಳಾದ ಕರಿಕೆ, ಕುಟ್ಟ ಮತ್ತು ಮಾಕುಟ್ಟಗಳಲ್ಲಿ, ಕೇರಳದಿಂದ ಕೊಡಗಿಗೆ ಬರುವವರನ್ನು ದಿನದ ಇಪ್ಪತ್ತನಾಲ್ಕು ಗಂಟೆಗಳ ಕಾಲ ತಪಾಸಣೆ ನಡೆಸಲು ಆರೋಗ್ಯ ಸಿಬ್ಬಂದಿಗಳನ್ನು ನೇಮಿಸಲಾಗಿದೆ.
ಸೋಂಕಿಲ್ಲದವರು ಮನೆಗೆ
ವಿದೇಶದಿಂದ ಬಂದ ಮೂವರು ವ್ಯಕ್ತಿಗಳಿಗೆ ಸೋಂಕು ತಗುಲಿರುವ ಶಂಕೆ ಇದ್ದು, ಅವರನ್ನು ಜಿಲ್ಲಾ ಆಸ್ಪತ್ರೆಯ ಪತ್ಯೇಕ ಕೊಠಡಿಯಲ್ಲಿರಿಸಿ ಉಪಚರಿಸಲಾಗುತ್ತಿದೆ. ಶಂಕಿತ ಕುಟುಂಬದ ಮೂವರನ್ನು ಪರೀಕ್ಷಿಸಲಾಗಿದ್ದು, ಅವರಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಾರದ ಹಿನ್ನೆಲೆಯಲ್ಲಿ ಅವರನ್ನು ಅವರವರ ಮನೆಗಳಿಗೆ ಕಳುಹಿಸಲಾಗಿದೆಯೆಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.







