ಕಲಬುರಗಿ: ಕೊರೋನ ದೃಢಪಟ್ಟ ವೈದ್ಯನ ಮನೆಯ ಸುತ್ತಮುತ್ತ ನಿಷೇಧಾಜ್ಞೆ
ಕಲಬುರಗಿ, ಮಾ.17: ಕೊರೋನಾದಿಂದ ದೃಢಪಟ್ಟ ವ್ಯಕ್ತಿಗೆ ಚಿಕಿತ್ಸೆ ನೀಡಿದ್ದ ವೈದ್ಯರೊಬ್ಬರಿಗೆ ಕೊರೋನ ಇರುವುದು ಪತ್ತೆಯಾದ ಹಿನ್ನೆಲೆ, ವೈದ್ಯಾಧಿಕಾರಿ ನಿವಾಸದ ಸುತ್ತಮುತ್ತ 300 ಮೀ. ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಿ ನಿಷೇಧಾಜ್ಞೆ ಹೇರಲಾಗಿದೆ.
'ವ್ಯಕ್ತಿಯೊಬ್ಬರು ಕೋವಿಡ್-19 ವೈರಸ್ ನಿಂದ ಮೃತಪಟ್ಟ ನಂತರ ಇಲಾಖೆ ಮೃತರ ಹತ್ತಿರ ತೆರಳಿದ ಪ್ರತಿಯೊಬ್ಬರ ಮಾಹಿತಿಯನ್ನು ಕಲೆ ಹಾಕುತ್ತಿದ್ದು, ಈ ವೇಳೆ ಕುಟುಂಬದ ಒಬ್ಬರಲ್ಲಿ ವೈರಸ್ ಪತ್ತೆಯಾಗಿದ್ದು, ಇದರ ಬೆನ್ನಲ್ಲೆ ಮೃತರಿಗೆ ಚಿಕಿತ್ಸೆ ನೀಡಿದ್ದ 63 ವರ್ಷದ ವೈದ್ಯನಿಗೂ ಈ ವೈರಸ್ ತಗಲಿರುವುದು ಇಂದು ದೃಢಪಟ್ಟಿದೆ' ಎಂದು ಜಿಲ್ಲಾಧಿಕಾರಿ ಶರತ್.ಬಿ ಸ್ಪಷ್ಟಪಡಿಸಿದ್ದಾರೆ.
ವೈರಸ್ ಹೊಂದಿದ ಮೃತ ವ್ಯಕ್ತಿಯೊಂದಿಗೆ ಕುಟುಂಬಸ್ಥರೊಬ್ಬರು ಮತ್ತು ಎರಡನೆಯದಾಗಿ ವೈದ್ಯರೊಬ್ಬರು ನೇರ ಸಂಪರ್ಕ ಹೊಂದಿದ್ದರು ಎಂದು ತಿಳಿದುಬಂದಿದೆ.
ಯದುಲ್ಲಾ ಕಾಲೋನಿ ನಿವಾಸಿಗಿರುವ ನಿವೃತ್ತ ಸರಕಾರಿ ವೈದ್ಯ ಫಹೀಮುದ್ದೀನ್ ಅವರು ಕೆಲವು ದಿನಗಳವರೆಗೆ ವೃದ್ಧರಿಗೆ ಚಿಕಿತ್ಸೆ ನೀಡಿದ್ದರು. ಬಳಿಕ ಅವರು ಮೃತಪಟ್ಟಿದ್ದಾರೆ. ಇಂದು ವೈದ್ಯರಿಗೆ ಕೊರೋನ ಪತ್ತೆಯಾಗಿದ್ದು, ಐಸೋಲೇಶನ್ ವಾರ್ಡ್ ಗೆ ಶಿಫ್ಟ್ ಮಾಡಿ ಚಿಕಿತ್ಸೆಗೆ ಕ್ರಮ ವಹಿಸಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.