ಮಣಿಪಾಲದಲ್ಲಿ ಕೊರೋನ ಪ್ರಯೋಗಾಲಯಕ್ಕೆ ಬೇಡಿಕೆ
ಉಡುಪಿ, ಮಾ.17: ಶಂಕಿತ ನೋವೆಲ್ ಕೊರೋನ ವೈರಸ್ ಸೋಂಕಿತರ ಸಂಖ್ಯೆ ಕರಾವಳಿಯ ಮೂರು ಜಿಲ್ಲೆಗಳಲ್ಲಿ ನಿಧಾನವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೊರೋನ ವೈರಸ್ ಪ್ರಯೋಗಾಲಯವೊಂದನ್ನು ಪ್ರಾರಂಭಿಸುವುದಕ್ಕೆ ಬೇಡಿಕೆಯನ್ನು ಮಂಡಿಸಲಾಗಿದೆ.
ಮೊದಲು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಂದ ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿರುವ ವೈರಸ್ ಪತ್ತೆ ಪ್ರಯೋಗಾಲಯಕ್ಕೆ ಇಲ್ಲಿನ ಶಂಕಿತ ಸೋಂಕಿತರ ಸ್ಯಾಂಪಲ್‌ಗಳನ್ನು ಕಳುಹಿಸಲಾಗುತ್ತಿತ್ತು. ಇದೀಗ ಶಿವಮೊಗ್ಹದಲ್ಲಿ ಪ್ರಯೋಗಾಲಯ ಪ್ರಾರಂಭಗೊಂಡ ಬಳಿಕ ಅಲ್ಲಿಗೆ ಇವುಗಳನ್ನು ಕಳುಹಿಸಲಾಗುತ್ತಿದೆ.
ಜಿಲ್ಲಾ ಮಟ್ಟದಲ್ಲಿ ಪ್ರಯೋಗಾಲಯವೊಂದರ ಅಗತ್ಯವಿದೆ ಎಂದು ಹೇಳಿರುವ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ, ಇದಕ್ಕೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಅವಕಾಶ ನೀಡಿದರೆ ಅನುಕೂಲವಾಗುತ್ತದೆ ಎಂದರು.
ಕರಾವಳಿಯ ಮೂರು ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಜಿಲ್ಲೆಗಳಿಗೆ ಇದರಿಂದ ಅನುಕೂಲವಾಗುತ್ತದೆ. ಆರೋಗ್ಯ ಸಚಿವರೊಂದಿಗೆ ನಡೆಸಿದ ವಿಡಿಯೋ ಕಾನ್ಫರೆನ್ಸ್ ವೇಳೆ ಈ ವಿಚಾರವನ್ನು ಚರ್ಚಿಸಿದ್ದೇನೆ. ಈ ಪ್ರಸ್ತಾಪಕ್ಕೆ ಮಣಿಪಾಲ ಕೆಎಂಸಿಯವರೂ ಒಪ್ಪಿದ್ದಾರೆ ಎಂದು ಡಾ.ಸೂಡಾ ತಿಳಿಸಿದರು.







