ದುಬೈಯಿಂದ ಬೆಂಗಳೂರಿಗೆ ಬಂದ ಮಹಿಳೆಗೆ ಕೊರೋನ ದೃಢ: ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆ
ರಾಜ್ಯದ ಮೂವರು ಕೊರೋನ ಪೀಡಿತರು ಗುಣಮುಖ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.17: ದುಬೈನಿಂದ ಬಂದ ಬೆಂಗಳೂರಿಗೆ ಆಗಮಿಸಿದ ಮಹಿಳೆಗೆ ಕೊರೋನ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
67 ವರ್ಷದ ಮಹಿಳೆ ಮಾ.9ರಂದು ದುಬೈನಿಂದ, ಗೋವಾ ಮಾರ್ಗವಾಗಿ ಬೆಂಗಳೂರಿಗೆ ಬಂದಿದ್ದರು. ಮಹಿಳೆಗೆ ಕಿಡ್ನಿಗೆ ಸಂಬಂಧಿಸಿದ ತೀವ್ರ ಸಮಸ್ಯೆಯೂ ಇದ್ದು, ಬೆಂಗಳೂರಿಗೆ ಬಂದಾಗಿನಿಂದ ಆಕೆಯನ್ನು ಮನೆಯಲ್ಲೇ ಇರಿಸಲಾಗಿತ್ತು. ಮಾ. 16ರಂದು ಅವರು ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಇವರು ತಮ್ಮ ಐವರು ಕುಟುಂಬ ಸದಸ್ಯರೂ ಸೇರಿದಂತೆ 21 ಮಂದಿಯೊಂದಿಗೆ ಪ್ರತ್ಯಕ್ಷ, ಪರೋಕ್ಷ ಸಂಪರ್ಕಕ್ಕೆ ಬಂದಿದ್ದಾರೆ. ಅವರೆಲ್ಲರನ್ನೂ ಮನೆಯಲ್ಲಿಯೇ ಇರಿಸಿ ನಿಗಾವಹಿಸಲಾಗಿದೆ.
ಸೋಮವಾರ ರಾತ್ರಿಯಿಂದ ಸೋಂಕಿತರ ಸಂಖ್ಯೆ 10 ಆಗಿತ್ತು. ಇದೀಗ ಹೊಸದಾಗಿ ಮತ್ತೊಬ್ಬರಿಗೆ ಕೊರೋನ ಸೋಂಕು ಇರುವುದು ಪತ್ತೆಯಾಗಿದೆ. ಆದರೆ ಅವರು ಯಾರು ಎಂಬುದರ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಅಧಿಕಾರಿಗಳು ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಈಗಾಗಲೇ ಕಲಬುರಗಿಯ ಒಬ್ಬರು ವ್ಯಕ್ತಿ ಸೋಂಕಿನಿಂದ ಸಾವಿಗೀಡಾಗಿದ್ದಾರೆ.
ಗುಣಮುಖರಾದ ಕೊರೋನ ಪೀಡಿತರು: ರಾಜ್ಯದಲ್ಲಿ ಮೊದಲ ಕೊರೋನ ಕೇಸ್ ಪತ್ತೆಯಾದ ಮೂವರು ವ್ಯಕ್ತಿಗಳು ಗುಣಮುಖರಾಗಿದ್ದು, ಬುಧವಾರ ಡಿಸ್ಚಾರ್ಜ್ ಆಗಲಿದ್ದಾರೆ.
ಯಾರಾರು ಆ 11 ಜನ ?
* ಬೆಂಗಳೂರಿನ ವೈಟ್ ಫೀಲ್ಡ್ ಮೂಲದ ವ್ಯಕ್ತಿಗೆ ಮೊದಲ ಕೊರೋನ ಸೋಂಕು ಪತ್ತೆ. ಮಾರ್ಚ್ 9 ರಂದು ಸೋಂಕು ದೃಢ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ
* ವೈಟ್ಫೀಲ್ಡ್ ವ್ಯಕ್ತಿಯ ಪತ್ನಿಗೆ ಕೊರೋನ ಸೋಂಕು. ಮಾರ್ಚ್ 10 ರಂದು ಸೋಂಕು ಇರುವುದು ದೃಢ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ಟೆಕ್ಕಿಯಿಂದ ಸೋಂಕು ತಗುಲಿದ ಹಿನ್ನೆಲೆ ವರದಿಯಲ್ಲಿ ಪಾಸಿಟಿವ್.
* ವೈಟ್ ಫೀಲ್ಡ್ ವ್ಯಕ್ತಿಯ ಪುತ್ರಿಗೆ ಕೊರೋನ ಸೋಂಕು. ಮಾರ್ಚ್ 10ರಂದು ಸೋಂಕು ತಗುಲಿರುವುದು ದೃಢ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ. ಟೆಕ್ಕಿಯಿಂದ ಸೋಂಕು ತಗುಲಿದ ಹಿನ್ನೆಲೆ ವರದಿಯಲ್ಲಿ ಪಾಸಿಟಿವ್
* ಗೂಗಲ್ ಉದ್ಯಮಿಗೆ ಕೊರೋನ ಸೋಂಕು ಖಚಿತ. ಅಮೆರಿಕಾಕ್ಕೆ ಹೋಗಿ ಬಂದಿದ್ದ ಆರ್.ಆರ್ ನಗರದ ನಿವಾಸಿ ಟೆಕ್ಕಿ.
* ಬೆಂಗಳೂರಿನ ಟೆಕ್ಕಿ ಗೆ ಸೋಂಕು ದೃಢ. ಗ್ರೀಸ್ನಿಂದ ಬಂದಿದ್ದ 26 ವರ್ಷದ ವ್ಯಕ್ತಿ. ಮಾರ್ಚ್ 12 ಕೊರೋನ ಸೋಂಕು ದೃಢ. ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ.
* ಕಲಬುರಗಿ ಮೂಲದ 76 ವರ್ಷದ ವ್ಯಕ್ತಿಗೆ ಸೋಂಕು. ಸೌದಿ ಅರೇಬಿಯಾದಿಂದ ಬಂದಿದ್ದ ವ್ಯಕ್ತಿ. ಚಿಕಿತ್ಸೆ ಫಲಕಾರಿಯಾಗದೆ ಮಾ. 9ರಂದು ಸಾವು.
* ಕಲಬುರಗಿ ವ್ಯಕ್ತಿಯ ಪುತ್ರಿಗೆ ಸೋಂಕು. ತಂದೆಯ ಜತೆ ಇದ್ದಿದ್ದರಿಂದ ಪುತ್ರಿಗೂ ಹರಡಿದ ಸೋಂಕು. ಮಾ.15 ರಂದು ಸೋಂಕು ಇರುವುದು ದೃಢ. ಕಲಬುರಗಿಯಲ್ಲಿ ಮಹಿಳೆಗೆ ಚಿಕಿತ್ಸೆ.
* ಅಮೆರಿಕಾದಿಂದ ಬಂದಿದ್ದ 4ನೆ ಪ್ರಕರಣ ವ್ಯಕ್ತಿಯಿಂದ ಸೋಂಕು. ವ್ಯಕ್ತಿಯ ಸಹೋದ್ಯೋಗಿಯಾಗಿದ್ದ ಈ ವ್ಯಕ್ತಿ. ವ್ಯಕ್ತಿಗೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ. ಮಾ.16 ಸೋಂಕು ಇರುವುದು ದೃಢ.
* ಬೆಂಗಳೂರಿನಲ್ಲಿ ಮತ್ತೋರ್ವರಿಗೆ ಕೊರೋನ ಸೋಂಕು. ಮಾ.16 ಸೋಂಕು ತಗುಲಿರುವುದು ದೃಢ.
* ಕಲಬುರಗಿಯ ವೃದ್ಧನಿಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಕೊರೋನ ಸೋಂಕು. ಮಾ.16 ರಂದು ಸೋಂಕು ದೃಢ.
* 67 ವರ್ಷದ ಬೆಂಗಳೂರಿನ ಮಹಿಳಾ ರೋಗಿಗೆ ಕೊರೋನ. ದುಬೈನಿಂದ ಗೋವಾಗೆ ಮಾರ್ಚ್ 9 ರಂದು ವಾಪಸ್. ಮಂಗಳವಾರ ಬೆಂಗಳೂರಿಗೆ ಬಂದಾಗ ಸೋಂಕು ಪತ್ತೆ.







