ಅಂಟಾರ್ಕಟಿಕ ದಂಡಯಾತ್ರೆಗೆ ಮಾಹೆ ಪ್ರಾಧ್ಯಾಪಕರು
ಮಣಿಪಾಲ, ಮಾ.17: ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ)ಯ ಪ್ರೊ.ಅನೀಶ್ ವಾರಿಯರ್ ಹಾಗೂ ಮಣಿಪಾಲ ಕಾಲೇಜ್ ಆಫ್ ಫಾರ್ಮಸ್ಯೂಟಿಕಲ್ ಸಾಯನ್ಸ್ (ಎಂಕಾಪ್ಸ್)ನ ಪ್ರೊ.ಕೃಷ್ಣಮೂರ್ತಿ ಭಟ್ ಅವರು ಇತ್ತೀಚೆಗೆ ಪೂರ್ಣಗೊಂಡ 39ನೇ ಭಾರತೀಯ ಅಂಟಾರ್ಕಟಿಕ ದಂಡಯಾತ್ರೆಯಲ್ಲಿ ಭಾಗವಹಿಸಿ ಮಣಿಪಾಲಕ್ಕೆ ಹಿಂದಿರುಗಿದ್ದಾರೆ.
ಡಾ.ಅನೀಶ್ ವಾರಿಯರ್ ಅವರು ಎಂಐಟಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದು, ಮಾಹೆಯ ಹವಾಮಾನ ಬದಲಾವಣೆ ಕೇಂದ್ರದ ಸಂಯೋಜಕರು. ಇವರು ಪೂರ್ವ ಅಂಟಾರ್ಕಟಿಕದಲ್ಲಿರುವ ಭಾರತದ ‘ಮೈತ್ರಿ’ ನೆಲೆಯಲ್ಲಿ 45 ದಿನಗಳ ಕಾಲ ತಂಗಿದ್ದು, ಭೂಮಿಯ ಹವಾಮಾನ ಬದಲಾವಣೆಯ ಇತಿಹಾಸವನ್ನು, ಅಲ್ಲಿ ಹುದುಗಿರುವ ಸರೋವರದ ಅಡಿಯಲ್ಲಿರುವ ಮಡ್ಡಿಯನ್ನು ಅಗೆದು ತೆಗೆದು ತಿಳಿದುಕೊಂಡಿದ್ದಾರೆ. ಡಾ.ಅನೀಶ್ ವಾರಿಯರ್ ಅಂಟಾರ್ಕಟಿಕ ಯಾತ್ರೆಗೆ ತೆರಳುತ್ತಿರುವುದು ಇದು ನಾಲ್ಕನೇ ಬಾರಿಗೆ.
ಪ್ರೊ.ಕೃಷ್ಣಮೂರ್ತಿ ಭಟ್ ಇವರು ಎಂಕಾಪ್ಸ್‌ನಲ್ಲಿ ಪ್ರಾಧ್ಯಾಪಕರು. ಇವರು ಪೂರ್ವ ಅಂಟಾರ್ಕಟಿಕದ ಭಾರತದ ಇನ್ನೊಂದು ನೆಲೆಯಾದ ‘ಭಾರತಿ’ಯಲ್ಲಿ 64 ದಿನಗಳ ಕಾಲ ತಂಗಿದ್ದರು. ಮಾನವ ಅಲ್ಲಿನ ಸೂಕ್ಷ್ಮ ಪ್ರಕೃತಿಯನ್ನು ಕಲುಷಿತ ಗೊಳಿಸುತಿದ್ದಾನೆಯೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಅವರು ಅಲ್ಲಿನ ಕೆರೆ ಕೊಳ್ಳ ಸಾಗರಗಳ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಅಲ್ಲಿನ ಕೇಂದ್ರಗಳಲ್ಲಿ ಬಿಸಿಲಿನ ಅಲ್ಟ್ರಾವೈಲೆಟ್ ರೇಸ್‌ಗಳನ್ನು ತಡೆಯಲು ಬಳಸುವ ಮುಲಾಮುಗಳಲ್ಲಿರುವ ಔಷಧೀಯ ವಸ್ತುಗಳು ಅಲ್ಲಿನ ಕೆರೆಕೊಳ್ಳ ಸಾಗರಗಳನ್ನು ಸೇರಿ ಅಲ್ಲಿನ ಜೀವಸಂಕುಲಗಳಿಗೆ ಹಾನಿಯನ್ನುಂಟು ಮಾಡುತ್ತಿವೆಯೊ ಎಂಬುದು ಇವರ ಸಂಶೋಧನಾ ವಿಷಯ ವಾಗಿದೆ. ಇವರು ಎಂಐಟಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಡಾ.ಕೆ.ಬಾಲಕೃಷ್ಣರ ಸಹಯೋಗದಲ್ಲಿ ಈ ಸಂಶೋಧನೆಯನ್ನು ಕೈಗೊಂಡಿದ್ದಾರೆ.
ಮಾಹೆಯ ಈ ಇಬ್ಬರು ಪ್ರಾಧ್ಯಾಪಕರು ಕಳೆದ ನಾಲ್ಕು ದಶಕಗಳಲ್ಲಿ ಅಂಟಾರ್ಕಟಿಕಕ್ಕೆ ತೆರಳಿದ ಸುಮಾರು 2500 ವಿಜ್ಞಾನಿಳ ಗುಂಪಿಗೆ ಸೇರ್ಪಡೆ ಗೊಂಡಿದ್ದಾರೆ







