ಉಷ್ಣತೆಯು ಕೊರೋನವೈರಸನ್ನು ನಿಯಂತ್ರಿಸಬಹುದೇ?
ಆಗ್ನೇಯ ಏಶ್ಯ ದೇಶಗಳಲ್ಲಿ ಇದು ಸಾಬೀತಾಗಿಲ್ಲ

ಸಿಂಗಾಪುರ, ಮಾ. 17: ಇತ್ತೀಚಿನ ದಿನಗಳಲ್ಲಿ ಆಗ್ನೇಯ ಏಶ್ಯ ದೇಶಗಳಲ್ಲಿ ಕೊರೋನವೈರಸ್ ಕಾಯಿಲೆಯು ತೀವ್ರವಾಗಿ ಹರಡಿದ್ದು, ಉಷ್ಣ ಪ್ರದೇಶದಲ್ಲಿ ಈ ವೈರಸ್ ಬದುಕುವುದಿಲ್ಲ ಎಂಬ ಸಿದ್ಧಾಂತದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಹಲವು ಆಗ್ನೇಯ ಏಶ್ಯ ದೇಶಗಳಲ್ಲಿ ಕಡಿಮೆ ಪ್ರಮಾಣದ ಕೊರೋನವೈರಸ್ ಸೋಂಕು ಪ್ರಕರಣಗಳು ವರದಿಯಾಗಿದ್ದವು. ಹಾಗಾಗಿ, ಬಿಸಿ ವಾತಾವರಣವು ವೈರಸನ್ನು ನಿರ್ಮೂಲಗೊಳಿಸುತ್ತದೆ ಎಂಬುದಾಗಿ ಭಾವಿಸಲಾಗಿತ್ತು. ಇದು ಬೇಸಿಗೆಯೆಡೆಗೆ ಹೆಜ್ಜೆ ಹಾಕುತ್ತಿರುವ ಅಮೆರಿಕ ಮತ್ತು ಯುರೋಪ್ ದೇಶಗಳಲ್ಲಿ ಭರವಸೆಯನ್ನು ಮೂಡಿಸಿತ್ತು.
ಆದರೆ, ಇಂಡೋನೇಶ್ಯದಿಂದ ಥಾಯ್ಲೆಂಡ್‌ವರೆಗೆ ಹಾಗೂ ಮಲೇಶ್ಯದಿಂದ ಫಿಲಿಪ್ಪೀನ್ಸ್‌ವರೆಗಿನ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಕೊರೋನವೈರಸ್ ಸೋಂಕು ಪ್ರಕರಣಗಳು ಕಾಣಿಸಿಕೊಂಡಿವೆ. ಹಾಗಾಗಿ, ಉಷ್ಣತೆಯು ಕೊರೋನವೈರಸ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ ಎಂಬ ಅಭಿಪ್ರಾಯಕ್ಕೆ ಬರಲಾಗುತ್ತಿದೆ.
‘‘ಆಗ್ನೇಯ ಏಶ್ಯದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಈ ಉಷ್ಣತೆ ಸಿದ್ಧಾಂತವು ಸರಿ ಎಂದು ಅನಿಸುವುದಿಲ್ಲ’’ ಎಂದು ಸಿಂಗಾಪುರದ ಲೀ ಕುವಾನ್ ಯೂ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿಯ ಪ್ರೊಫೆಸರ್ ಟಿಕ್ಕಿ ಪಂಗೆಸ್ಟು ಹೇಳುತ್ತಾರೆ.







