ಬಗ್ದಾದ್: ವಿದೇಶಿ ಪಡೆಗಳ ನೆಲೆ ಮೇಲೆ ರಾಕೆಟ್ ದಾಳಿ
ಬಗ್ದಾದ್ (ಇರಾಕ್), ಮಾ. 17: ಇರಾಕ್ನಲ್ಲಿನ ಅಮೆರಿಕ ನೇತೃತ್ವದ ಮಿತ್ರಪಡೆ ಮತ್ತು ನ್ಯಾಟೋ ಪಡೆಗಳ ನೆಲೆಯೊಂದಕ್ಕೆ ಅವಳಿ ರಾಕೆಟ್ಗಳು ಅಪ್ಪಳಿಸಿವೆ ಎಂದು ಇರಾಕ್ ಸೇನೆ ಮಂಗಳವಾರ ತಿಳಿಸಿದೆ. ಇದು ಇರಾಕ್ನಲ್ಲಿರುವ ವಿದೇಶಿ ಪಡೆಗಳ ನೆಲೆಗಳ ಮೇಲೆ ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ನಡೆದ ಮೂರನೇ ದಾಳಿಯಾಗಿದೆ.
ಇರಾಕ್ ರಾಜಧಾನಿ ಬಗ್ದಾದ್ನ ದಕ್ಷಿಣದಲ್ಲಿರುವ ಬಿಸ್ಮಯ ನೆಲೆಗೆ ಸೋಮವಾರ ತಡ ರಾತ್ರಿ ರಾಕೆಟ್ಗಳು ಅಪ್ಪಳಿಸಿದವು ಎಂದು ಇರಾಕ್ ಸೇನೆ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.
ಐಸಿಸ್ ಭಯೋತ್ಪಾದಕ ಸಂಘಟನೆಯ ವಿರುದ್ಧ ಹೋರಾಡುತ್ತಿರುವ ಅಮೆರಿಕ ನೇತೃತ್ವದ ಮಿತ್ರಪಡೆಗೆ ಸೇರಿದ ಸ್ಪೇನ್ ಪಡೆಗಳು ಹಾಗೂ ನ್ಯಾಟೋ ತರಬೇತಿ ಪಡೆಗಳು ಬಿಸ್ಮಿಯ ನೆಲೆಯಲ್ಲಿವೆ. ಆದರೆ, ದಾಳಿಯಿಂದ ಸಾವು-ನೋವು ಸಂಭವಿಸಿದೆಯೇ ಎನ್ನುವುದನ್ನು ಹೇಳಿಕೆ ತಿಳಿಸಿಲ್ಲ.
Next Story