ಕೊರೋನ ಭೀತಿ ಹಿನ್ನೆಲೆ: ಸಾಲಿಗ್ರಾಮ ಪ.ಪಂ. ಮುನ್ನೆಚ್ಚರಿಕೆ ಕ್ರಮ
ಉಡುಪಿ, ಮಾ.17: ಕೊರೋನ ಸೋಂಕು ತಡೆಗಾಗಿ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಅದರಂತೆ ಅನುಸರಣಾ ಕ್ರಮಗಳನ್ನು ಸಾರ್ವತ್ರಿಕವಾಗಿ ಪಾಲಿಸುವಂತೆ ಪಂಚಾಯತ್‌ನ ಪ್ರಕಟಣೆ ತಿಳಿಸಿದೆ.
ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ರಂಗಮಂದಿರಗಳು, ನಾಟಕಗಳು, ಯಕ್ಷಗಾನ, ಕ್ಲಬ್‌ಗಳನ್ನು ಸಂಪೂರ್ಣವಾಗಿ ಮುಚ್ಚಬೇಕು. ವಸ್ತು ಪ್ರದರ್ಶನ, ಸಂಗೀತ, ಹಬ್ಬಗಳು, ಮ್ಯಾರಥಾನ್ ಇತ್ಯಾದಿ ನಡೆಸುವಂತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವುದರಿಂ ದ ಕ್ರಿಕೆಟ್ ಕ್ರೀಡೆ ಆಯೋಜಿಸುವಂತಿಲ್ಲ.
ಮದುವೆ, ನಿಶ್ಚಿತಾರ್ಥ ಇತ್ಯಾದಿ ಕಾರ್ಯಕ್ರಮಗಳು ಪೂರ್ವ ನಿಗದಿ ಯಾಗಿದ್ದಲ್ಲಿ ಅಂತಹ ಕಾರ್ಯಕ್ರಮಗಳಲ್ಲಿ 100ಕ್ಕಿಂತ ಹೆಚ್ಚು ಜನರು ಸೇರದಂತೆ ನೋಡಿಕೊಳ್ಳಬೇಕು. ಹೊಸದಾಗಿ ಮದುವೆ ನಿಶ್ಚಿತಾರ್ಥ ಇತ್ಯಾದಿ ಕಾರ್ಯಕ್ರಮ ಗಳಿಗೆ ಹಾಲ್‌ಗಳನ್ನು ಕಾಯ್ದಿರಿಸುವಂತಿಲ್ಲ. ಧಾರ್ಮಿಕ ಕೇಂದ್ರಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಮಾತ್ರ ನಡೆಸಬೇಕು. ಜಾತ್ರೆ, ಉತ್ಸವ ಇತ್ಯಾದಿ ಕಾರ್ಯಕ್ರಮ ನಡೆಸುವಂತಿಲ್ಲ.
ಈಗಾಗಲೇ ನಿಗದಿಪಡಿಸಿದ ಪರೀಕ್ಷೆಗಳನ್ನು ಸೂಕ್ತ ಮುಂಜಾಗೃತಾ ಕ್ರಮ ದೊಂದಿಗೆ ನಡೆಸಬಹುದು. ಹೆಚ್ಚಾಗಿ ವಿದೇಶಗಳಿಗೆ ಪ್ರಯಾಣಿಸುವ ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ಸೂಚಿಸಲು ಸಂಸ್ಥೆಗಳು ಅಗತ್ಯ ಕ್ರಮವಹಿಸಬೇಕು. ವೈಯಕ್ತಿಕ ಶುಚಿತ್ವವನ್ನು ಪ್ರತಿಯೊಬ್ಬರೂ ಕಾಪಾಡಿಕೊಳ್ಳಬೇಕು. ಸೋಂಕಿನ ಲಕ್ಷಣಗಳಾದ ಶೀತ, ಕೆಮ್ಮು ಜ್ವರದ ಲಕ್ಷಣ ಕಾಣಿಸಿಕೊಂಡಲ್ಲಿ ಸೂಕ್ತ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವಂತೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







