ಪುರಸಭೆ ಅಭಿವೃದ್ಧಿಗೆ ಅನುದಾನ ಮಂಜೂರಾತಿಯಲ್ಲಿ ಶಾಸಕರು ವಿಫಲ: ಮಾ. 26ರಂದು ಪ್ರತಿಭಟನೆ
ಪಡುಬಿದ್ರಿ : ಹೊಸದಾಗಿ ರಚನೆಯಾದ ಕಾಪು ಪುರಸಭೆ ಅಭಿವೃದ್ಧಿಗಾಗಿ ಅನುದಾನ ದೊರಕಿಸಿಕೊಡುವಲ್ಲಿ ಶಾಸಕರು ವೈಫಲ್ಯ ಕಂಡಿದ್ದಾರೆ ಎಂದು ಆರೋಪಿಸಿ ಕಾಪು ಬ್ಲಾಕ್ ಕಾಂಗ್ರೆಸ್, ಮಾ. 26ರಂದು ಪ್ರತಿಭಟನೆಯನ್ನು ಆಯೋಜಿಸಿದೆ.
ಕಾಪು ರಾಜೀವ್ ಭವನದಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾಹಿತಿ ನೀಡಿ, ಅಂದು ರಾಜೀವ್ ಭವನದಿಂದ ಮೆರವಣಿಗೆ ಹೊರಟು ಪುರಸಭೆಯ ಎದುರಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ನನ್ನ ಅಧಿಕಾರಾವಧಿಯಲ್ಲಿ ಮಂಜೂರಾತಿ ದೊರಕಿದ ಅನುದಾನಗಳ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಯನ್ನು ಲಾಲಾಜಿ ಮೆಂಡನ್ ನೆರವೇರಿಸುತಿದ್ದಾರೆ ಎಂದು ಲೇವಡಿ ಮಾಡಿದ ಸೊರಕೆ, ಕಾಪು ಪುರಸಭೆಗೆ ಬಿಜೆಪಿ ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿತ್ತು. ಲಾಲಾಜಿ ಮೆಂಡನ್ ಶಾಸಕರಾಗಿ ಬಂದ ಬಳಿಕ ನಗರ ಪ್ರಾಧಿಕಾರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಾಗಿ ಚನಾವಣಾ ಸಂದರ್ಭದಲ್ಲಿ ಹೇಳಿತ್ತು. ಆದರೆ ಪರಿಹಾರ ಮಾತ್ರ ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ನಗರ ಪ್ರಾಧಿಕಾರಕ್ಕೆ ಮಾಸ್ಟರ್‍ಪ್ಲಾನ್ ರಚಿಸಿ ಅದಕ್ಕೊಂದು ಬೈಲಾ ಮಾಡಿದಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗುತಿತ್ತು. ನನ್ನ ಅವಧಿಯಲ್ಲಿ ಕಾಪು ಪುರಸಭೆಯ ಎಸ್‍ಸಿ, ಎಸ್‍ಟಿ ವಿವಿಧ ಕಾಮಗಾರಿಗಾಗಿ ಮಂಜೂರಾತಿ ದೊರಕಿತ್ತು. ಆದರೆ ಇಂದು ಈ ಅನುದಾನವನ್ನು ಬಳಸಿಕೊಳ್ಳದೆ ಅದನ್ನು ಕಾರ್ಕಳಕ್ಕೆ ವರ್ಗಾವಣೆ ಮಾಡಲಾ ಗಿದೆ. ಕಾಪು ಪುರಸಭೆಯಲ್ಲಿ ನಗರೋತ್ತಾನ ಕಾರ್ಯಕ್ರಮದ ಮೀನು ಮಾರುಕಟ್ಟೆ ಅಭಿವೃದ್ಧಿಗೆ 1.40 ಕೋಟಿ ರೂ. ಅನುದಾನ ಜೋಡಿಸಲಾಗಿತ್ತು. ಆ ಅನುದಾನವನ್ನು ರಸ್ತೆಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗಿದೆ. ಆದರೆ ಈ ರಸ್ತೆಯೂ ಕಳಪೆಯಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು. ನನ್ನ ಅವಧಿಯಲ್ಲಿ ಕಾಪು ಪುರಸಭೆ ವ್ಯಾಪ್ತಿಯ ಕುಡಿಯುವ ನೀರಿಗಾಗಿ 55 ಕೋಟಿ ರೂ. ಅನುದಾನ ಮಂಜೂರಾತಿ ದೊರಕಿತ್ತು. ಇದರಲ್ಲಿ ಸ್ಥಳೀಯರಿಗೂ ನೀರು ದೊರಕುವ ಯೋಜನೆ ರೂಪಿಸಲಾಗಿತ್ತು. ಆದರೆ ಇದನ್ನು ಇಂದಿನವರೆಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಿ ಯೋಜನೆ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದಾರೆ. 5 ಕೋಟಿ ರೂ. ವೆಚ್ಚದಲ್ಲಿ ಎಲ್ಲೂರಿನಲ್ಲಿ ಕಸ ವಿಲೇವರಿ ಘಟಕಕ್ಕೆ ಮಂಜೂರಾತಿ ದೊರಕಿತ್ತು. ಆದರೆ ಸ್ಥಳೀಯರ ವಿರೋಧದ ಬಳಿಕ ಕಾರ್ಯ ಸ್ಥಗಿತಗೊಂಡಿತ್ತು ಈ ಬಗ್ಗೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ. ಮೂಳೂರಿನಲ್ಲಿ ವಸತಿರಹಿತರಿಗಾಗಿ 500 ಮನೆಗಳ ಮಂಜೂರಾಗಿತ್ತು. ಫ್ಲಾಟ್ ಮಾದರಿಯಲ್ಲಿ ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಅದನ್ನು ಇದುವರೆಗೂ ಅನುಷ್ಠಾನಕ್ಕೆ ತಂದಿಲ್ಲ. ಕಾಪುವಿಗೆ 10ಕೋಟಿ ರೂ. ಮಿನಿ ವಿಧಾನಸೌಧಕ್ಕೆ ಹಣ ಮಂಜೂರಾತಿ ದೊರಕಿದ್ದರೂ ಅದನ್ನು ಬಿಡುಗಡೆ ಮಾಡಿಸಲು ಶಾಸಕರಿಗೆ ಇನ್ನೂ ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ನವೀನ್‍ಚಂದ್ರ ಸುವರ್ಣ, ಮುಖಂಡರಾದ ದೇವಿಪ್ರಸಾದ್ ಶೆಟ್ಟಿ, ಪುರಸಭಾ ಸದಸ್ಯರು ಉಪಸ್ಥಿತರಿದ್ದರು.





