ಹಕ್ಕಿಜ್ವರ ಭೀತಿ: ಮೈಸೂರಿನಲ್ಲಿ 4,100 ಕೋಳಿಗಳ ಜೀವಂತ ಸಮಾಧಿ

ಸಾಂದರ್ಭಿಕ ಚಿತ್ರ
ಮೈಸೂರು,ಮಾ.17: ನಗರದ ಕುಂಬಾರಕೊಪ್ಪಲಿನಲ್ಲಿ ಹಕ್ಕಿಜ್ವರ ದೃಢಪಟ್ಟ ಹಿನ್ನಲೆಯಲ್ಲಿ 1 ಕೀ.ಮಿ ವ್ಯಾಪ್ತಿಯೊಳಗೆ ಬರುವ ಮೇಟಗಳ್ಳಿಯ ಅಶ್ವಿನಿ ಪೌಲ್ಟ್ರಿ ಫಾರಂನಲ್ಲಿ 4,100 ಕೋಳಿಗಳನ್ನು ಕಲ್ಲಿಂಗ್ (ಜೀವಂತ ಸಮಾಧಿ) ಮಾಡಲಾಯಿತು.
ನಗರಪಾಲಿಕೆ ಮತ್ತು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಮಂಗಳವಾರ ಬೆಳಗ್ಗೆಯಿಂದಲೇ ಜಂಟಿ ಕಾರ್ಯಚರಣೆ ನಡೆಸಿ 'ಕುಂಬಾರಕೊಪ್ಪಲಿನ 1 ಕೀ.ಮಿ ವ್ಯಾಪ್ತಿಗೆ ಬರುವ ಎಲ್ಲಾ ಪಕ್ಷಿಗಳನ್ನು ಶಿಷ್ಟಾಚಾರದಂತೆ ಪಕ್ಷಿವಧೆ ಮಾಡಲಾಗುವುದು' ಎಂದು ಕರಪತ್ರ ಮೂಲಕ ಸಾರ್ವಜನಿಕರಿಗೆ ಹಂಚಿ ಜಾಗೃತಿ ಮೂಡಿಸಿದರು. ಈ ವ್ಯಾಪ್ತಿಯಲ್ಲಿ ಎಷ್ಟು ಪಕ್ಷಿಗಳು ಇವೆ ಎಂಬುದನ್ನು ಈಗಾಗಲೇ ಸರ್ವೆ ಮಾಡಿರುವ ಅಧಿಕಾರಿಗಳು ಇಂದು ಸುಮಾರು 4100 ಪಕ್ಷಿಗಳನ್ನು ಕಲ್ಲಿಂಗ್ ಮಾಡಿದರು.
ಕುಂಬಾರಕೊಪ್ಪಲಿನ ರಾಮಣ್ಣ ಅವರ ಮನೆಯಲ್ಲಿ ಹತ್ತಕ್ಕೂ ಹೆಚ್ಚು ಕೋಳಿಗಳು ಸಾವನ್ನಪ್ಪಿದ್ದವು. ಹಾಗೆಯೇ, ಸ್ಮಶಾನದಲ್ಲಿ ಕೊಕ್ಕರೆ ಸಾವನ್ನಪ್ಪಿತ್ತು. ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಇವುಗಳ ಸ್ಯಾಂಪಲ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪಕ್ಷಿಗಳು ಹಕ್ಕಿಜ್ವರದಿಂದ ಸಾವನ್ನಪ್ಪಿವೆ ಎಂಬ ಮಾಹಿತಿ ಬಂದ ಹಿನ್ನಲೆಯಲ್ಲಿ ಜಿಲ್ಲಾಡಳಿತ ಈ ವ್ಯಾಪ್ತಿಯ 1 ಕೀ.ಮೀ ಒಳಗಿನ ಎಲ್ಲಾ ಪಕ್ಷಿಗಳನ್ನು ಕಲ್ಲಿಂಗ್ ಮಾಡುವುದಾಗಿ ತಿಳಿಸಿತ್ತು.
ಇದರಂತೆ ಕುಂಬಾರಕೊಪ್ಪಲಿನ ಅನತಿ ದೂರದಲ್ಲಿರುವ ಅಶ್ವಿನಿ ಪೌಲ್ಟ್ರಿಫಾರಂ ನಲ್ಲಿ ಸುಮಾರು 2ಸಾವಿರಕ್ಕೂ ಹೆಚ್ಚು ಕೋಳಿಗಳು ಇದ್ದದನ್ನು ಪತ್ತೆ ಹಚ್ಚಿದ ಅಧಿಕಾರಿಗಳು ಇತರೆ ಕಡೆಗಳಲ್ಲಿ ಇದ್ದ ಕೋಳಿಗಳನ್ನು ಸೇರಿಸಿ ಒಟ್ಟು 4,100 ಕೋಳಿಗಳನ್ನು ಅಶ್ವಿನಿ ಪೌಲ್ಟ್ರಿಫಾರಂನಲ್ಲಿ ಜೆಸಿಬಿ ಮೂಲಕ ಗುಂಡಿ ತೆಗೆಸಿ ಹೂತುಹಾಕಿದರು.
ಕೋಳಿಗಳನ್ನು ಹೂತುಹಾಕಲಾಗಿರುವ ಜಾಗವನ್ನು ಸುಣ್ಣ, ಕೆಮಿಕಲ್ ಹಾಕಿ ಮುಚ್ಚಲಾಗಿದ್ದು, ಯಾವುದೇ ವೈರಸ್ ಇತರೆಡೆ ಹರಡದಂತೆ ಮುನ್ನಚ್ಚರಿಕೆ ವಹಿಸಲಾಗಿದೆ. ಕಲ್ಲಿಂಗ್ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಗಳಿಗೆ ಮಾಸ್ಕ್, ಕಿಟ್, ರೇಡಿಯಸ್ ಬಟ್ಟೆಗಳು ಸೇರಿದಂತೆ ಅನೇಕ ರಕ್ಷಣಾತ್ಮಕ ವಸ್ತುಗಳನ್ನು ನೀಡಲಾಗಿತ್ತು.
ಈಗಾಗಲೇ ಕುಂಬಾರಕೊಪ್ಪಲು ವ್ಯಾಪ್ತಿಯ ಸಾಕು ಪಕ್ಷಿಗಳನ್ನು ಗುರುತಿಸಲಾಗಿದ್ದು, ಸುಮಾರು 6 ಸಾವಿರಕ್ಕೂ ಹೆಚ್ಚು ಪಕ್ಷಿಗಳು ಇವೆ ಎಂಬ ಮಾಹಿತಿ ಲಭ್ಯವಾಗಿದೆ. ಮೊದಲಿಗೆ ಈಗಾಗಲೇ ಕುಂಬಾರಕೊಪ್ಪಲು ವ್ಯಾಪ್ತಿಯ 10 ಕಿ.ಮೀ. ನಲ್ಲಿ ಇರುವ ಕೋಳಿ ಮಾಂಸದ ಅಂಗಡಿಗಳನ್ನು ಬಂದ್ ಮಾಡಿಸಲಾಗಿದ್ದು, ಹಕ್ಕಿಜ್ವರ ಇದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಹಲವರು ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದ್ದರು, ಇನ್ನು ಕೆಲವರು ಅಂಗಡಿಯನ್ನು ಫಿನಾಯಿಲ್ ಮೂಲಕ ಸ್ವಚ್ಛಗೊಳಿಸಿದ್ದರು. ಇಂದು 4 ಸಾವಿರಕ್ಕೂ ಹೆಚ್ಚು ಪಕ್ಷಿಗಳನ್ನು ವಧೆ ಮಾಡಲಾಗಿದೆ. ನಾಳೆ ಇನ್ನು ಉಳಿದ ಪಕ್ಷಿಗಳನ್ನು ಕಲ್ಲಿಂಗ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದ್ದಾರೆ.







