ಹೇಲ್ಸ್ ಗೆ ಕೊರೋನ ಸೋಂಕು ಶಂಕೆ
ಪಿಎಸ್‌ಎಲ್ ಮುಂದೂಡಿಕೆ

ಕರಾಚಿ, ಮಾ.17: ಪಾಕಿಸ್ತಾನದ ಸೂಪರ್ ಲೀಗ್‌ನ್ನು (ಪಿಎಸ್‌ಎಲ್) ಮಂಗಳವಾರ ಮುಂದೂಡಲಾಗಿದೆ. ಟೂರ್ನಿಯಲ್ಲಿ ಪಾಲ್ಗೊಂಡ ವಿದೇಶಿ ಆಟಗಾರರಲ್ಲಿ ಕೊರೋನ ವೈರಸ್ ಸೋಂಕು ಪತ್ತೆಯಾದ ಬಳಿಕ ಟೂರ್ನಿಯನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿದೆ.
ಪಿಎಸ್‌ಎಲ್ ನಾಕೌಟ್ ಹಂತವನ್ನು ಪ್ರವೇಶಿಸಿತ್ತು ಮತ್ತು ಸೆಮಿಫೈನಲ್ ಪಂದ್ಯಗಳು ಮಂಗಳವಾರ ಮತ್ತು ಅಂತಿಮ ಪಂದ್ಯವನ್ನು ಲಾಹೋರ್‌ನಲ್ಲಿ ಆಡಬೇಕಿತ್ತು. ಕೊರೋನ ವೈರಸ್ ಸೋಂಕು ಹರಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ ಪಿಸಿಬಿ ಲೀಗ್‌ನ್ನು ನಾಲ್ಕು ದಿನಗಳವರೆಗೆ ಸೀಮಿತಗೊಳಿಸಿತ್ತು. ಆದರೆ ಮಂಗಳವಾರ ಅದನ್ನು ಹಿಂತೆಗೆದುಕೊಂಡಿದೆ.
ಪಾಕಿಸ್ತಾನವನ್ನು ತೊರೆದ ವಿದೇಶಿ ಆಟಗಾರರೊಬ್ಬರು ತನ್ನಲ್ಲಿ ಕೊರೋನ ರೋಗದ ಲಕ್ಷಣಗಳಿವೆ ಎಂದು ತಿಳಿಸಿದ ಬಳಿಕ ಪಿಎಸ್‌ಎಲ್‌ಅನ್ನು ರದ್ದುಗೊಳಿಸುವ ನಿರ್ಧಾರ ಕೈಗೊಂಡಿರುವುದಾಗಿ ಪಿಸಿಬಿ ಸಿಇಒ ವಸೀಮ್ ಖಾನ್ ತಿಳಿಸಿದ್ದಾರೆ. ಆದರೆ ಇದಕ್ಕೂ ಮೊದಲು ಯಾವುದೇ ಅನುಮಾನಾಸ್ಪದ ಪ್ರಕರಣಗಳು ಕಂಡು ಬರಲಿಲ್ಲ, ಅದಕ್ಕಾಗಿಯೇ ಈ ಮೊದಲು ನಿರ್ಧಾರ ತೆಗೆದುಕೊಳ್ಳಲಿಲ್ಲ ಎಂದು ಅವರು ಹೇಳಿದರು. ಇಂಗ್ಲೆಂಡ್‌ನ 31ರ ಹರೆಯದ ಆಟಗಾರ ಅಲೆಕ್ಸ್ ಹೇಲ್ಸ್‌ಗೆ ಕೊರೋನ ವೈರಸ್ ಸೋಂಕು ತಗಲಿರುವ ಬಗ್ಗೆ ಪಾಕಿಸ್ತಾನದ ಮಾಜಿ ನಾಯಕ ರಮೀಝ್ ರಾಜಾ ಶಂಕೆ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ತಲುಪಿದ ನಂತರ ಹೇಲ್ಸ್ ಸ್ವಯಂ-ಪ್ರತ್ಯೇಕತೆಗೆ ಕಾಯ್ದುಕೊಂಡಿದ್ದಾರೆ ಎಂದು ವರದಿಯಾಗಿದೆ.







