'ಪಾಪು' ಕನ್ನಡ ನಾಡು ಕಂಡ ಮಹಾನ್ ವ್ಯಕ್ತಿ : ಪಾಪ್ಯುಲರ್ ಫ್ರಂಟ್

ಮಂಗಳೂರು : ಹಿರಿಯ ಹೋರಾಟಗಾರ ಹಾಗೂ ಸಾಹಿತಿ ನಾಡೋಜ ಡಾ. ಪಾಟೀಲ ಪುಟ್ಟಪ್ಪರವರ ನಿಧನಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ತೀವ್ರ ಸಂತಾಪ ಸೂಚಿಸಿದ್ದಾರೆ.
ಅಪ್ರತಿಮ ಹೋರಾಟಗಾರ, ನಿರ್ಭೀತ ಪತ್ರಕರ್ತ ಮತ್ತು ಸೃಜನಶೀಲ ಬರಹಗಾರರಾಗಿದ್ದ ಅವರು, ಕನ್ನಡ ನಾಡು-ನುಡಿಯ ಉಳಿವಿಗಾಗಿ ಅಪಾರ ಕೊಡುಗೆಯನ್ನು ನೀಡಿದ್ದರು. ಅವರ ಸಾಹಿತ್ಯ ಕೃತಿಗಳು ಕನ್ನಡ ನಾಡಿನ ಸಂಸ್ಕೃತಿ ಮತ್ತು ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವಲ್ಲಿ ಅನನ್ಯ ಕೊಡುಗೆಯನ್ನು ನೀಡಿವೆ. ಪತ್ರಕರ್ತರಾಗಿ ಹೆಸರಾಂತ ಪತ್ರಿಕೆಗಳಿಗೆ ಬರೆಯುತ್ತಿದ್ದ ಅವರ ತೀಕ್ಷ್ಣ ಬರಹಗಳು ಕನ್ನಡದ ಅಸ್ಮಿತೆ, ಸಾಮಾಜಿಕ ನ್ಯಾಯದ ಕೂಗನ್ನು ಗಟ್ಟಿಗೊಳಿಸಿದ್ದವು ಮತ್ತು ಭ್ರಾತೃತ್ವದ ಸಂದೇಶವನ್ನು ನೀಡಿದ್ದವು. ಕನ್ನಡ ನೆಲದ ಸಾಕ್ಷಿಪ್ರಜ್ಞೆಯಾಗಿದ್ದ ಪಾಪುರವರು ಈ ನಾಡು ಕಂಡ ಮಹಾನ್ ವ್ಯಕ್ತಿತ್ವವಾಗಿದ್ದರು ಎಂದು ಅವರು ಹೇಳಿದ್ದಾರೆ.
ಕನ್ನಡ ನಾಡಿನ ಜನತೆಗೆ, ಪಾಪುರವರ ಕುಟುಂಬ ವರ್ಗದವರಿಗೆ ಮತ್ತು ಅವರ ಹಿತೈಷಿಗಳಿಗೆ ಯಾಸಿರ್ ಹಸನ್ ಸಾಂತ್ವನ ವ್ಯಕ್ತಪಡಿಸಿದ್ದಾರೆ. ಮಾನವೀಯತೆಯ ಸಮಾಜ ಕಟ್ಟುವ ಉದ್ದೇಶದಿಂದ ಪಾಟೀಲ ಪುಟ್ಟಪ್ಪನವರು ಬಿತ್ತಿದ ಅಕ್ಷರ ಬೀಜಗಳಿಗೆ ನೀರೆರೆದು ಬೆಳೆಸುವ ಜವಾಬ್ಧಾರಿಯು ನಾಗರಿಕ ಸಮಾಜದ ಮೇಲಿದೆ ಎಂದು ಪಾಪ್ಯುಲರ್ ಫ್ರಂಟ್ ಹೇಳಿದೆ.





