ಖಾಲಿ ಸ್ಟೇಡಿಯಂಗಳಲ್ಲಿ ಟೋಕಿಯೊ ಒಲಿಂಪಿಕ್ಸ್ ಗೇಮ್ಸ್ ಆಯೋಜನೆ ಇಲ್ಲ: ಐಒಸಿ
ಲಂಡನ್, ಮಾ.17: 2020ರ ಟೋಕಿಯೊ ಒಲಿಂಪಿಕ್ ಗೇಮ್ಸ್ ನ್ನು ಮುಚ್ಚಿದ ಕೊಠಡಿಗಳಲ್ಲಿ ಆಯೋಜಿಸುವ ಸಾಧ್ಯತೆಯನ್ನು ಅಂತರ್‌ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ)ತಳ್ಳಿ ಹಾಕಿದೆ. ಒಲಿಂಪಿಕ್ ಗೇಮ್ಸ್‌ನ್ನು ಖಾಲಿ ಸ್ಟೇಡಿಯಂಗಳಲ್ಲಿ ಆಯೋಜಿಸಲು ಐಒಸಿ ಸಿದ್ಧವಿಲ್ಲ. ಇದು ಒಲಿಂಪಿಕ್ಸ್‌ನ ಮೂಲ ತತ್ವಗಳಿಗೆ ವಿರುದ್ಧವಾಗಿದೆಯೆಂದು ಅದು ನಂಬಿದೆ ಎಂದು ‘ದಿ ಗಾರ್ಡಿಯನ್’ ವರದಿ ಮಾಡಿದೆ. ‘‘ಗೇಮ್ಸ್ ರದ್ದತಿಗೆ ಮೇ ತಿಂಗಳು ಗಡುವಲ್ಲ. ಕೊರೋನ ವೈರಸ್‌ನಿಂದಾಗಿ ವಿಶ್ವದಾದ್ಯಂತ ಕ್ರೀಡಾ ಚಟುವಟಿಕೆಗಳು ಸ್ತಬ್ಧ್ದವಾಗಿದ್ದರೂ ಒಲಿಂಪಿಕ್ಸ್ ಸ್ಪರ್ಧೆ ನಿಗದಿಯಂತೆ ನಡೆಯುವ ವಿಶ್ವಾಸ ನನಗಿದೆ’’ ಎಂದು ಟೋಕಿಯೊ ಒಲಿಂಪಿಕ್ಸ್‌ನ ಐಒಸಿ ಸಮನ್ವಯ ಆಯೋಗದ ನಾಯಕ ಜಾನ್ ಕೋಟ್ಸ್ ತಿಳಿಸಿದರು. ಆದರೆ, ಖಾಲಿ ಸ್ಟೇಡಿಯಂಗಳಲ್ಲಿ ಒಲಿಂಪಿಕ್ ಗೇಮ್ಸ್‌ನ್ನು ಆಯೋಜಿಸುವುದಿಲ್ಲ ಎಂದು ಐಒಸಿ ಸ್ಪಷ್ಟಪಡಿಸಿದೆ.
‘‘ಖಾಲಿ ಸ್ಟೇಡಿಯಂನಲ್ಲಿ ಗೇಮ್ಸ್ ಆಯೋಜಿಸುವುದು ನಾವು ಪಾಲಿಸುತ್ತಿರುವ ಎಲ್ಲ ತತ್ವಗಳಿಗೆ ವಿರುದ್ಧವಾಗಿದೆ. ಒಲಿಂಪಿಕ್ಸ್ ಕೇವಲ ಸ್ಪರ್ಧೆಗಳ ಸರಣಿಗಿಂತ ಮಿಗಿಲಾದುದು. ಇದು ಕ್ರೀಡೆಯನ್ನು ಆಚರಿಸಲು ಪ್ರತಿಯೊಬ್ಬರನ್ನು ಒಟ್ಟುಗೂಡಿಸುತ್ತದೆ. ಮುಚ್ಚಿದ ಕೊಠಡಿಗಳಲ್ಲಿ, ಪ್ರೇಕ್ಷಕರಿಲ್ಲದೆ ಒಲಿಂಪಿಕ್ ಗೇಮ್ಸ್ ಆಯೋಜಿಸುವುದು ಒಂದು ಆಯ್ಕೆಯೇ ಅಲ್ಲ’’ ಎಂದು ‘ದಿ ಗಾರ್ಡಿಯನ್’ ಗೆ ಮೂಲಗಳು ತಿಳಿಸಿವೆ.
ಒಂದು ವೇಳೆ ಒಲಿಂಪಿಕ್ ಗೇಮ್ಸ್ ನಡೆಯದೇ ಇದ್ದರೆ ಗಂಭೀರ ಪರಿಣಾಮಬೀರಲಿದ್ದು, ಗೇಮ್ಸ್ ಆಯೋಜಕರು ಟಿಕೆಟ್ ಮಾರಾಟವೊಂದರಿಂದ 1 ಬಿಲಿಯನ್ ಡಾಲರ್ ನಷ್ಟ ಅನುಭವಿಸುತ್ತಾರೆ.ಗೇಮ್ಸ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಥ್ಲೀಟ್‌ಗಳು ಭಾಗವಹಿಸುವಂತಾಗಲು ಐಒಸಿ ಅರ್ಹತಾ ಮಾನದಂಡದಲ್ಲಿ ಸಡಿಲಿಕೆ ಮಾಡುವ ಕುರಿತು ಚಿಂತನೆ ನಡೆಸುತ್ತಿದೆ. ಕೆಲವು ಅರ್ಹತಾ ಟೂರ್ನಿಗಳು ನಡೆದಿದ್ದು, ಕ್ಲೈಬಿಂಗ್, ಬಾಕ್ಸಿಂಗ್, ಕತ್ತಿವರಸೆ ಹಾಗೂ ಜುಡೋ ಸ್ಪರ್ಧೆಗಳ ಅರ್ಹತಾ ಟೂರ್ನಿಗಳು ಒಂದೋ ರದ್ದುಗೊಂಡಿವೆ ಅಥವಾ ಮುಂದೂಡಲ್ಪಟ್ಟಿವೆ.







