ಬಂಟ್ವಾಳ: ಸರಕಾರಿ ಸಿಬ್ಬಂದಿಯ ಕರ್ತವ್ಯಕ್ಕೆ ಮಹಿಳೆ ಅಡ್ಡಿ; ದೂರು
ಬಂಟ್ವಾಳ, ಮಾ.15: ಮಹಿಳೆಯೋರ್ವಳು ಸರಕಾರಿ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲದೆ ಜೀವ ಬೆದರಿಕೆ ಹಾಕಿದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ಬರಿಮಾರು ಗ್ರಾಮ ಪಂಚಾಯತ್ ದೂರು ನೀಡಿದೆ.
ಬರಿಮಾರು ಕಾಗೆಕಾನ ನಿವಾಸಿ ಪುಷ್ಪಾ ಶೆಟ್ಟಿ ಎಂಬಾಕೆ ಬರಿಮಾರು ಗ್ರಾಮ ಪಂಚಾಯತ್ ಸಿಬ್ಬಂದಿಯ ಕರ್ತವ್ಯ ಅಡ್ಡಿಪಡಿಸಿದಲ್ಲದೆ ಪಂಚಾಯತ್ ಕಚೇರಿಯ ಒಳಗೆ ನುಗ್ಗಿ ಗ್ರಾಮ ಪಂಚಾಯತ್ ಅಧ್ಯಕ್ಷ ಸದಸ್ಯರ ಮುಂದೆಯೆ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದ್ದಾಳೆ ಎಂದು ದೂರು ದಾಖಲಾಗಿದೆ.
ಪುಷ್ಪ ಶೆಟ್ಟಿ ಮಂಗಳೂರು ಬ್ಯಾಂಕ್ ಒಂದರಿಂದ ಸಾಲ ಪಡೆದಿದ್ದು ಸಾಲ ಮರುಪಾವತಿ ಮಾಡದೆ ಜಮೀನು ಏಲಂಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಬ್ಯಾಂಕ್ ಬರಿಮಾರು ಗ್ರಾಮ ಪಂಚಾಯತ್ ಗೆ ಪುಷ್ಪ ಶೆಟ್ಟಿ ಯ ಜಮೀನು ಏಲಂ ಮಾಡುವ ಬಗ್ಗೆ ಏಲಂ ನೋಟಿಸ್ ನ್ನು ಕಳುಹಿಸಿ ನೋಟೀಸ್ ನ್ನು ಬೋರ್ಡ್ ನಲ್ಲಿ ಹಾಕುವಂತೆ ಕೋರಿತ್ತು. ಬ್ಯಾಂಕ್ ಕೋರಿಕೆಯಂತೆ ಏಲಂ ನೋಟಿಸನ್ನು ಬೋರ್ಡ್ ನಲ್ಲಿ ಗ್ರಾಮಪಂಚಾಯತ್ ಹಾಕಿತ್ತು. ಆದರೆ ಪಂಚಾಯತ್ ಹಾಕಿದ ನೋಟೀಸ್ ನ್ನು ಪದೇ ಪದೇ ಹರಿದು ಹಾಕಿದ್ದಲ್ಲದೆ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಬೆದರಿಕೆ ಹಾಕಿ ನಿಂದನೆ ಮಾಡಿದ್ದಾಳೆ ಎಂದು ಗ್ರಾಮ ಪಂಚಾಯತ್ ದೂರು ನೀಡಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಐದು ದಿನ ಕಳೆದರೂ ಆರೋಪಿಯ ಮೇಲೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗ್ರಾಮ ಪಂಚಾಯತ್ ಜಿ.ಪಂ.ಮುಖ್ಯಕಾರ್ಯನಿರ್ವಣಾಧಿಕಾರಿಯವರಲ್ಲಿ ದೂರಿಕೊಂಡಿದ್ದು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಅವರು ತಿಳಿಸಿದ್ದಾರೆ ಎಂದು ಪಂಚಾಯತ್ ಮೂಲಗಳು ತಿಳಿಸಿವೆ.





