ಕೊರೋನ ಪರಿಣಾಮ: ರಾಜ್ಯದಲ್ಲಿ ಕುಕ್ಕುಟೋದ್ಯಮಕ್ಕೆ 1 ಸಾವಿರ ಕೋಟಿ ರೂ. ನಷ್ಟ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.17: ರಾಜ್ಯಾದ್ಯಂತ ಕೊರೋನದಿಂದ ಆತಂಕದ ಛಾಯೆ ಮನೆ ಮಾಡಿದ್ದು, ಅದರ ಪರಿಣಾಮ ರಾಜ್ಯದ ಕುಕ್ಕುಟೋದ್ಯಮದ ಮೇಲೂ ಬೀರಿದೆ. ಕಳೆದ ಒಂದು ವಾರದಿಂದ ಸುಮಾರು ಒಂದು ಸಾವಿರ ಕೋಟಿ ನಷ್ಟವನ್ನು ಅನುಭವಿಸಿದೆ.
ರಾಜ್ಯದಲ್ಲಿ ಒಂದರ ಮೇಲೊಂದರಂತೆ ಹಲವಾರು ಮಾರಣಾಂತಿಕ ಕಾಯಿಲೆಗಳ ಪ್ರಭಾವ ಹೆಚ್ಚಾಗುತ್ತಲೇ ಇದೆ. ಚಿಕ್ಕಮಗಳೂರಿನಿಂದ ಆರಂಭವಾದ ಮಂಗನ ಕಾಯಿಲೆಯೂ ಸೇರಿದಂತೆ ಹಕ್ಕಿಜ್ವರ, ಕಾಲರಾವೂ ಜನರನ್ನು ಪೀಡಿಸುತ್ತಿವೆ. ಇದರ ನಡುವೆ ಕೊರೋನ ಮಹಾಮಾರಿ ಜನರನ್ನು ಮತ್ತಷ್ಟು ಆತಂಕಕ್ಕೀಡು ಮಾಡಿದೆ.
ಈ ಹಿಂದೆ ರಾಜ್ಯದಲ್ಲಿ ಪ್ರತಿದಿನ 14 ಲಕ್ಷ ಕೆ.ಜಿ. ಕೋಳಿ ಮಾಂಸ ಮಾರಾಟವಾಗುತ್ತಿತ್ತು. ಆದರೆ ಈಗ 1ರಿಂದ 1.5 ಲಕ್ಷ ಕೆ.ಜಿ.ಗೆ ಬಂದು ನಿಂತಿದೆ. ಒಟ್ಟಾರೆ, ಕೋಳಿ ಮಾಂಸದ ಮಾರಾಟ ಗಣನೀಯವಾಗಿ ಕಡಿಮೆಯಾಗಿದೆ. ಸಗಟು ಮಾರಾಟ ದರ ತೀವ್ರವಾಗಿ ಇಳಿದಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ಅಲ್ಪ ಇಳಿಕೆಯಾಗಿದೆ.
ಕೋಳಿ ಮಾಂಸ ಮಾರಾಟ ಶೇ. 80ರಷ್ಟು ಕುಸಿದಿದೆ. ದಿನಕ್ಕೆ 100 ಕೋಳಿ ವ್ಯಾಪಾರವಾಗುತ್ತಿದ್ದ ಅಂಗಡಿಗಳಲ್ಲಿ, 20ರಿಂದ 25 ಕೋಳಿಗಳು ಮಾರಾಟವಾಗುತ್ತಿವೆ. ಕೋಳಿಗಳಿಂದ ಕೊರೋನ ಸೋಂಕು ಹರಡುತ್ತದೆ ಎಂಬ ಸುಳ್ಳು ಸುದ್ದಿಯಿಂದ ಈ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈ ಪ್ರಮಾಣದ ನಷ್ಟ ಉಂಟಾಗಿರುವುದು ಇತಿಹಾಸದಲ್ಲಿ ಇದೇ ಮೊದಲು ಎಂದು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ಅಧ್ಯಕ್ಷ ಡಿ.ಕೆ. ಕಾಂತರಾಜು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಸಾಮಾನ್ಯವಾಗಿ ಒಂದು ದಿನಕ್ಕೆ 1,400 ಟನ್ ಕೋಳಿ ಮಾಂಸ ಮಾರಾಟವಾಗುತ್ತಿತ್ತು. ಈಗ ಕೇವಲ 400 ಟನ್ ಮಾರಾಟವಾಗುತ್ತಿದೆ. 1 ತಿಂಗಳ ಹಿಂದೆ ಕೋಳಿ ಮಾಂಸ ಪ್ರತಿ ಕೆ.ಜಿ.ಗೆ 80 ರೂ.ಗಳಿಂದ 100 ರೂ.ವರೆಗೆ ಇತ್ತು. ಈಗ ಅದು 10 ರಿಂದ 30 ರೂ.ಗೆ ಕುಸಿದಿದೆ. ವಿಶ್ವದ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ರೋಗ ಕಾಣಿಸಿಕೊಳ್ಳಲಿ, ಇದಕ್ಕೆ ಮೊದಲು ಬಲಿಯಾಗುವುದು ಕುಕ್ಕುಟೋದ್ಯಮ. ಕೋಳಿಗಳಿಂದಲೇ ವೈರಾಣು ಹರಡುತ್ತಿದೆ ಎಂದು ವದಂತಿಗಳು ಹಬ್ಬಿ ಗಂಭೀರ ಪ್ರಭಾವ ಬೀರಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಗಾಯದ ಮೇಲೆ ಬರೆ: ಮೈಸೂರು ಮತ್ತು ದಾವಣಗೆರೆಯಲ್ಲಿ ಹಕ್ಕಿಜ್ವರ ಪ್ರಕರಣ ವರದಿಯಾಗಿರುವ ಬೆನ್ನಲ್ಲೇ, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕಾಲರಾ ಇರುವುದರಿಂದ ತರಕಾರಿ ಮಳಿಗೆಗಳು, ಹಣ್ಣಿನ ಅಂಗಡಿ, ಕೋಳಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಇಂತಹ ಪ್ರಕರಣದಿಂದಲೂ ಕುಕ್ಕುಟೋದ್ಯಮಕ್ಕೆ ಹೊಡೆತ ಬಿದ್ದಿದೆ ಎಂದು ಹಲವರು ಅಭಿಪ್ರಾಯಿಸಿದ್ದಾರೆ.
ಮೊಟ್ಟೆಗೂ ಹೊಡೆತ: ರಾಜ್ಯದಲ್ಲಿ ದಿನಕ್ಕೆ ಸುಮಾರು 2 ಕೋಟಿ ಮೊಟ್ಟೆಗಳನ್ನು ಉತ್ಪಾದನೆ ಮಾಡಲಾಗುತ್ತದೆ. ಅದರಲ್ಲಿ ಸುಮಾರು 1.5 ಕೋಟಿಯಷ್ಟು ರಾಜ್ಯದಲ್ಲಿ ಮಾರಾಟವಾದರೆ ಉಳಿದ 50 ಲಕ್ಷ ನೆರೆಯ ಕೇರಳ, ಗೋವಾ ಮತ್ತು ಮಹಾರಾಷ್ಟ್ರಗಳಿಗೆ ರವಾನೆಯಾಗುತ್ತಿತ್ತು. ಆದರೆ ಕೊರೋನ ಭೀತಿಯಿಂದ ಈಗ ಮೊಟ್ಟೆ ಪೂರೈಕೆ ಕೂಡ ನಿಂತಿದೆ.







