ಲಿಂಗಾಯತ ಸಂಪ್ರದಾಯದಂತೆ ಪಾಟೀಲ ಪುಟ್ಟಪ್ಪ ಅಂತ್ಯಕ್ರಿಯೆ

ಹುಬ್ಬಳ್ಳಿ, ಮಾ.17: ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪರವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಮಂಗಳವಾರ ಅವರ ಸ್ವಗ್ರಾಮ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ಲಿಂಗಾಯತ ಸಂಪ್ರದಾಯದಂತೆ ನಡೆಯಿತು. ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಕಳೆದ ಒಂದು ತಿಂಗಳಿನಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ರಾತ್ರಿ ನಿಧನ ಹೊಂದಿದ್ದರು.
ಮಂಗಳವಾರ ಬೆಳಗ್ಗೆ 9 ರಿಂದ 12ರವರೆಗೆ ಇಲ್ಲಿಯ ಅಶೋಕನಗರದ ನಿವಾಸದಲ್ಲಿ ಅವಕಾಶ ಕಲ್ಪಿಸಲಾಯಿತು. ತದನಂತರ ಮೃತದೇಹವನ್ನು ಧಾರವಾಡಕ್ಕೆ ಕೊಂಡೊಯ್ದು ಅಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇರಿಸಲಾಯಿತು. ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ್ದ ಕನ್ನಡ ಪರ ಹೋರಾಟಗಾರರು, ಗಣ್ಯರು, ಅಭಿಮಾನಿಗಳು, ಸ್ವಾಮೀಜಿಗಳು ಹುಬ್ಬಳ್ಳಿಯ ಮನೆಯಲ್ಲಿ ಹಾಗೂ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಪಾಟೀಲ ಪುಟ್ಟಪ್ಪರವರ ಅಂತಿಮ ದರ್ಶನ ಪಡೆದರು. ನಂತರ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ದೀಪಾ ಚೋಳನ್ ಮತ್ತು ಹುಬ್ಬಳ್ಳಿ-ಧಾರವಾಡದ ಪೊಲೀಸ್ ಆಯುಕ್ತ ಆರ್.ದಿಲೀಪ್ ಅಂತಿಮ ಗೌರವ ಸಲ್ಲಿಸಿದರು.
ಮೂರುಸಾವಿರ ಮಠದ ಗುರುರಾಜ ಯೋಗೀಂದ್ರ ಸ್ವಾಮೀಜಿ, ವಿಜಯಾಪುರ ಮಠದ ಸಿದ್ದೇಶ್ವರ ಶ್ರೀ, ಸಚಿವ ಜಗದೀಶ್ ಶೆಟ್ಟರ್, ಶಾಸಕ ಅರವಿಂದ ಬೆಲ್ಲದ್, ಮಾಜಿ ಶಾಸಕ ಚಂದ್ರಕಾಂತ್ ಬೆಲ್ಲದ್, ಶ್ರೀನಿವಾಸ್ ಮಾನೆ, ಬಸವರಾಜ ಹೊರಟ್ಟಿ ಸೇರಿದಂತೆ ಅನೇಕ ಗಣ್ಯರು, ಮಠಾಧಿಪತಿಗಳು, ಜನಪ್ರತಿನಿಧಿಗಳು, ಕನ್ನಡ ಪರ ಸಂಘಟನೆಗಳ ಹೋರಾಟಗಾರರು, ನಾಗರಿಕ ಸಂಘಟನೆಗಳ ಪದಾಧಿಕಾರಿಗಳು, ಅನೇಕರು ಅಂತಿಮ ದರ್ಶನ ಪಡೆದು ಪಾಪು ನಿಧನಕ್ಕೆ ಕಂಬನಿ ಮಿಡಿದರು.





