ಅಸ್ಸಾಂನಲ್ಲಿ 6 ಬಂಧನ ಕೇಂದ್ರ: ಒಂದು ವರ್ಷದಲ್ಲಿ 10 ಮಂದಿ ಮೃತ್ಯು
ಲೋಕಸಭೆಗೆ ಮಾಹಿತಿ ನೀಡಿದ ಕೇಂದ್ರ ಗೃಹ ಸಚಿವಾಲಯ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಮಾ. 16: ಅಸ್ಸಾಂನಲ್ಲಿ 3,331 ವ್ಯಕ್ತಿಗಳನ್ನು ಬಂಧನದಲ್ಲಿ ಇರಿಸುವ ಸಾಮರ್ಥ್ಯ ಹೊಂದಿರುವ ಸುಮಾರು 6 ಬಂಧನ ಕೇಂದ್ರಗಳಿವೆ ಎಂದು ಕೇಂದ ಗೃಹ ಸಚಿವಾಲಯ ಮಂಗಳವಾರ ಲೋಕಸಭೆಗೆ ಮಾಹಿತಿ ನೀಡಿತು. ‘‘ಅಸ್ಸಾಂನಲ್ಲಿ 3,331 ವ್ಯಕ್ತಿಗಳನ್ನು ಬಂಧನದಲ್ಲಿ ಇರಿಸುವ ಸಾಮರ್ಥ್ಯ ಹೊಂದಿರುವ 6 ಬಂಧನ ಕೇಂದ್ರಗಳಿವೆ. ಬಂಧನ ಕೇಂದ್ರಗಳಾದ ತೆಜ್ಪುರ 797, ಸಿಲ್ಚಾರ್ 479, ದಿಬ್ರುಗಢ 680, ಜೊರ್ಹಾತ್ 670, ಕೊಕ್ರಝಾರ್ 335, ಗೋಲಪಾರ 370 ವ್ಯಕ್ತಿಗಳನ್ನು ಬಂಧನದಲ್ಲಿ ಇರಿಸುವ ಸಾಮರ್ಥ್ಯ ಹೊಂದಿದೆ’ ಎಂದು ತೃಣಮೂಲ ಕಾಂಗ್ರೆಸ್ನ ಲೋಕಸಭಾ ಸಂಸದೆ ನುಸ್ರತ್ ಜಹಾನ್ ರುಹಿ ಅವರ ಪ್ರಶ್ನೆಗೆ ಗೃಹ ಸಚಿವಾಲಯ ಪ್ರತಿಕ್ರಿಯೆ ನೀಡಿತು.
ಅಸ್ಸಾಂನ ಬಂಧನ ಕೇಂದ್ರಗಳು ಹಾಗೂ ಅದರ ಸಾಮರ್ಥ್ಯದ ಬಗ್ಗೆ ತೃಣಮೂಲ ಕಾಂಗ್ರೆಸ್ ಸಂಸದೆ ಗೃಹ ಸಚಿವಾಲಯದಲ್ಲಿ ಪ್ರಶ್ನಿಸಿದ್ದರು. ಅಸ್ಸಾಂನಲ್ಲಿ ಇನ್ನಷ್ಟೇ ನಿರ್ಮಾಣವಾಗಬೇಕಾಗಿರುವ ಹಾಗೂ ಕಾರ್ಯ ನಿರ್ವಹಿಸಬೇಕಾಗಿರುವ ಬಂಧನ ಕೇಂದ್ರಗಳ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಗೃಹ ಸಚಿವಾಲಯ, 3,000 ವ್ಯಕ್ತಿಗಳ ಸಾಮರ್ಥ್ಯದಲ್ಲಿ ಮಾಟಿಯಾ, ಗೋಲಪಾರದಲ್ಲಿ ಬಂಧನ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿತು.
ಕಳೆದ ಒಂದು ವರ್ಷದಲ್ಲಿ ಈಶಾನ್ಯ ರಾಜ್ಯಗಳಲ್ಲಿ ಮುಖ್ಯವಾಗಿ ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ ಬಂಧನ ಕೇಂದ್ರದಲ್ಲಿ ಮೃತಪಟ್ಟವರ ಸಂಖ್ಯೆ ಎಷ್ಟು ಎಂದು ನುಸ್ರತ್ ಗೃಹ ಸಚಿವಾಲಯದಲ್ಲಿ ಪ್ರಶ್ನಿಸಿದರು. ಇದಕ್ಕೆ ಸಚಿವಾಲಯ ‘‘ಅಸ್ಸಾಂನಲ್ಲಿ ಯಾವುದೇ ರಾಷ್ಟ್ರೀಯ ಪೌರತ್ವ ನೋಂದಣಿ ಬಂಧನ ಕೇಂದ್ರಗಳಿಲ್ಲ. ವಿದೇಶಿಗರು ಎಂದು ಘೋಷಿಸಿ ಅಸ್ಸಾಂನ ಬಂಧನ ಕೇಂದ್ರಗಳಲ್ಲಿ ಇರಿಸಲಾದ 10 ಮಂದಿ 2019 ಮಾರ್ಚ್ 1ರಿಂದ 2020 ಫೆಬ್ರವರಿ 29ರ ವರೆಗೆ ವಿವಿಧ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದಾರೆ’’ ಎಂದು ತಿಳಿಸಿತು.
‘‘ಈ ಸಂದರ್ಭ ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಮೂರು ತಂಡ ಅಸ್ಸಾಂನ ಬಂಧನ ಕೇಂದ್ರಗಳಿಗೆ ಭೇಟಿ ನೀಡಿದೆ ಹಾಗೂ ವಿದೇಶಿಯರು ಎಂದು ಘೋಷಿಸಲಾದ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸಿದೆ’’ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.







