ಹಾಸನ ಜಿಲ್ಲೆಯಲ್ಲಿ ಕೊರೋನ ವೈರಸ್ ಪತ್ತೆಯಾಗಿಲ್ಲ: ಜಿಲ್ಲಾಧಿಕಾರಿ ಆರ್.ಗಿರೀಶ್

ಹಾಸನ, ಮಾ.17: ಇಲ್ಲಿವರೆಗೂ ಜಿಲ್ಲೆಯಲ್ಲಿ ಕೊರೋನ ವೈರಸ್ ಪಾಸಿಟಿವ್ ವರದಿಯಾಗಿಲ್ಲ. ಇದರ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮ ವಹಿಸುವುದು ಸೂಕ್ತ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಹಾಸನ ಜಿಲ್ಲೆಯಲ್ಲಿ ಇಲ್ಲಿವರೆಗೂ 45 ಜನರ ಪರೀಕ್ಷೆಗಳನ್ನು ಮಾಡಿದ್ದು, ಯಾವ ವ್ಯಕ್ತಿಯಲ್ಲೂ ಕೂಡ ಪಾಸಿಟಿವ್ ಎಂದು ದೃಢಪಟ್ಟಿರುವುದಿಲ್ಲ ಎಲ್ಲಾ ನೆಗಟಿವ್ ವರದಿ ಬಂದಿದೆ ಎಂದರು. ಈಗಾಗಲೇ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ 20 ಹಾಸಿಗೆಯ ರೋಗ ತಗಲಿದ ವ್ಯಕ್ತಿಗಳಿಗೆ ಪ್ರತ್ಯೇಕ ವಾರ್ಡ್ ಮಾಡಲಾಗಿದ್ದು, ಅವಶ್ಯಕತೆ ಇದ್ದರೇ 300 ಹಾಸಿಗೆಗೆ ವಿಸ್ತರಿಸಲಾಗುವುದು. ಸರಕಾರದ ಆದೇಶದಂತೆ 50 ಹಾಸಿಗೆಗಳ ಕೊರೆಂಟೆಡ್ ವಾರ್ಡ್ ನಿರ್ಮಿಸಲಾಗಿದೆ. ಇನ್ನು ಎರಡು ಮೂರು ದಿವಸಗಳಲ್ಲಿ 100 ಹಾಸಿಗೆಗಳಿಗೆ ವಿಸ್ತರಿಸಲಾಗುವುದು. ಇದುವರೆಗೂ ಶಂಕಿತ 14 ಜನರನ್ನು ತುರ್ತು ಘಟಕದಲ್ಲಿ ಪರೀಕ್ಷೆಗೆ ಇಡಲಾಗಿದೆ. ಇದುವರೆಗೂ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ತಿಳಿಸಿದರು.
ವಿಮಾನ ನಿಲ್ದಾಣ, ಬಂದರುಗಳ ಬಗ್ಗೆ ಗಮನ ವಹಿಸಿ. ಪ್ರವಾಸಿ ತಾಣಗಳಲ್ಲಿ ಅರಿವು ಮೂಡಿಸಿ ತಪಾಸಣೆ ಮಾಡಬೇಕು. ವಿದೇಶದಿಂದ ಆಗಮಿಸಿರುವ ಎಲ್ಲರ ಆರೋಗ್ಯ ತಪಾಸಣೆ ನಡೆಸಿ 14 ದಿನಗಳ ಕಾಲ ಪ್ರತ್ಯೇಕವಾಗಿರಿಸಿ ನಿಗಾವಹಿಸಲಾಗುವುದು. ಇದುವರೆಗೂ 102 ಜಿಲ್ಲಾ ಪ್ರವಾಸಿಗರ ಆರೋಗ್ಯ ತಪಾಸಣೆಯನ್ನು ವೈದ್ಯಾಧಿಕಾರಿಗಳ ತಂಡ ಮಾಡಿದ್ದು, ಸೋಂಕು, ರೋಗ ಲಕ್ಷಣಗಳು ಕಂಡು ಬಂದಿಲ್ಲ. ಮುನ್ನೆಚ್ಚರಿಕ ಕ್ರಮವಾಗಿ ಬೇಲೂರು, ಹಳೇಬೀಡು, ಶ್ರವಣಬೆಳಗೊಳದಲ್ಲಿ ಹಾಗೂ ಪ್ರವಾಸಿ ತಾಣಗಳಲ್ಲಿ ಪ್ರವೇಶ ನಿರ್ಬಂಧಿಸಲು ಆದೇಶ ಹೊರಡಿಸಲಾಗಿದೆ ಎಂದರು. ಜಾತ್ರೆ, ಸಿನಿಮಾ ಮಂದಿರ, ಮದುವೆ, ಧಾರ್ಮಿಕ ಕಾರ್ಯಗಳು, ಸೂಪರ್ ಮಾರ್ಕೆಟ್ ಸೇರಿದಂತೆ ಜನ ಸೇರುವ ಸ್ಥಳಗಳಲ್ಲಿ ನಿಗಾವಹಿಸಿ ಕೊರೋನ ಬಗ್ಗೆ ಎಚ್ಚರಿಕೆ ವಹಿಸಿ ಕಡಿಮೆ ಜನರು ಸಭೆ ಸಮಾರಂಭದಲ್ಲಿ ಭಾಗವಹಿಸಲು ಪ್ರಚಾರ ಮಾಡಲಾಗಿದೆ ಎಂದು ವಿವರ ನೀಡಿದರು.
ಸಾರ್ವಜನಿಕರು ಯಾವುದೇ ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಮತ್ತು ಈ ವಿಚಾರದಲ್ಲಿ ಆರೋಗ್ಯ ಇಲಾಖೆಯವರೇ ಕ್ರಮಕೈಗೊಳ್ಳಲಿದ್ದಾರೆ. ಇನ್ನೊಂದು ವಾರದಲ್ಲಿ ಪರಿಸ್ಥಿತಿ ಬಗ್ಗೆ ಅರಿವಾಗಲಿದ್ದು ನಂತರ ಮುಂದಿನ ನಿರ್ಧಾರಗಳನ್ನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಇತರರು ಪಾಲ್ಗೊಂಡಿದ್ದರು.







