ದೇಶಾದ್ಯಂತ 54,000 ಜನರು ಸಮುದಾಯ ನಿಗಾದಲ್ಲಿ: ಕೇಂದ್ರ ಸರಕಾರ
ಕೊರೋನ ವೈರಸ್ ಭೀತಿ

ಹೊಸದಿಲ್ಲಿ, ಮಾ. 17: ದೇಶಾದ್ಯಂತ ಸುಮಾರು 54,000 ಜನರನ್ನು ಆರೋಗ್ಯ ಕಾರ್ಯಕರ್ತರ ಮೂಲಕ ಸಮುದಾಯ ನಿಗಾದಲ್ಲಿ ಇರಿಸಲಾಗಿದೆ ಎಂದು ಆರೋಗ್ಯ ಸಚಿವ ಹರ್ಷ ವರ್ಧನ್ ರಾಜ್ಯ ಸಭೆಗೆ ಮಂಗಳವಾರ ತಿಳಿಸಿದ್ದಾರೆ. ‘‘ಕೊರೋನ ವೈರಸ್ ಸೋಂಕಿತರ ಭೇಟಿ ಸಂದರ್ಭ ಒಂದು ಮೀಟರ್ ಅಂತರ ಕಾಯ್ದುಗೊಳ್ಳುವ ಅಗತ್ಯ ಇದೆ.
ಅಪಾಯಕಾರಿ ಸನ್ನಿವೇಶವನ್ನು ಸವಾಲಾಗಿ ಸ್ವೀಕರಿಸಿ ಪ್ರಾಮಾಣಿಕ ಹಾಗೂ ಬದ್ಧರಾಗಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ದಾದಿಗಳನ್ನು ನಾನು ಶ್ಲಾಘಿಸುತ್ತೇನೆ’’ ಎಂದು ಅವರು ಹೇಳಿದರು. ‘‘ನಗರ ಅಥವಾ ಗ್ರಾಮವಾಗಿರಲಿ, ಖಾಸಗಿ ಅಥವಾ ಸರಕಾರಿಯಾಗಿರಲಿ ಕೊರೋನ ವೈರಸ್ ಸೋಂಕನ್ನು ನಿಯಂತ್ರಿಸಲು ಎಲ್ಲ ಮಟ್ಟದಲ್ಲಿ ಪ್ರಯತ್ನ ನಡೆಸುತ್ತಿರುವ ವೈದ್ಯರು ಹಾಗೂ ದಾದಿಯರನ್ನು ಶ್ಲಾಘಿಸುತ್ತೇನೆ’’ ಎಂದು ಅವರು ಪ್ರಶ್ನೋತ್ತರ ವೇಳೆಯಲ್ಲಿ ಪೂರಕ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಹರ್ಷ ವರ್ಧನ್ ಅವರ ಕೈಗೊಂಡ ಕ್ರಮಗಳ ಬಗ್ಗೆ ಪ್ರತಿಪಕ್ಷದ ಸದಸ್ಯರೂ ಸೇರಿದಂತೆ ಸದನದ ಎಲ್ಲ ಸದಸ್ಯರು ಶ್ಲಾಘನೆ ವ್ಯಕ್ತಪಡಿಸಿದರು. ತಮ್ಮ ಪ್ರದೇಶದಲ್ಲಿ ಇರುವ ‘ಪ್ರತ್ಯೇಕ ವ್ಯವಸ್ಥೆ’ಗೆ ಭೇಟಿ ನೀಡುವಂತೆ ಸಂಸದರನ್ನು ಹರ್ಷವರ್ಧನ್ ಆಗ್ರಹಿಸಿದರು. ಅಲ್ಲದೆ, ಸೌಲಭ್ಯಗಳನ್ನು ಸುಧಾರಿಸುವಂತೆ ಹಾಗೂ ನ್ಯೂನತೆಗಳನ್ನು ಪರಿಶೀಲಿಸುವಂತೆ ಸಲಹೆ ನೀಡುವಂತೆ ತಿಳಿಸಿದರು.





