ನ್ಯಾ.ಗೊಗೋಯಿ ನ್ಯಾಯಾಂಗದ ನಿಷ್ಪಕ್ಷಪಾತದ ಜೊತೆ ರಾಜಿಯಾಗಿದ್ದು ಅಚ್ಚರಿ ಮೂಡಿಸಿದೆ:ನ್ಯಾ.ಜೋಸೆಫ್

ಫೈಲ್ ಚಿತ್ರ
ಹೊಸದಿಲ್ಲಿ,ಮಾ.17: ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಮದನ ಬಿ.ಲೋಕೂರ್ ಬಳಿಕ ಇದೀಗ ಇನ್ನೋರ್ವ ನಿವೃತ್ತ ನ್ಯಾಯಾಧೀಶ ಕುರಿಯನ್ ಜೋಸೆಫ್ ಅವರು ನಿವೃತ್ತ ಭಾರತದ ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯಿ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮಕರಣಗೊಳಿಸಿರುವುದನ್ನು ಪ್ರಶ್ನಿಸಿದ್ದಾರೆ.
2018,ಜನವರಿಯಲ್ಲಿ ದಿಲ್ಲಿಯಲ್ಲಿ ಅಭೂತಪೂರ್ವ ಸುದ್ದಿಗೋಷ್ಠಿಯನ್ನು ನಡೆಸಿದ್ದ ಗೊಗೋಯಿ ಸೇರಿದಂತೆ ಸರ್ವೋಚ್ಚ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಾಧೀಶರಲ್ಲೋರ್ವರಾಗಿದ್ದ ನ್ಯಾ.ಜೋಸೆಫ್,ಅಂದಿನ ಸುದ್ದಿಗೋಷ್ಠಿಯಲ್ಲಿ ನ್ಯಾ.ಗೊಗೊಯಿ ಅವರು ‘ನಾವು ದೇಶದ ಋಣವನ್ನು ತೀರಿಸಿದ್ದೇವೆ’ ಎಂದು ಹೇಳಿದ್ದನ್ನು ನೆನಪಿಸಿದರು. ನ್ಯಾ.ಲೋಕೂರ್ ಮತ್ತು ನ್ಯಾ.ಜೆ.ಚೆಲಮೇಶ್ವರ ಅವರು ಸುದ್ದಿಗೋಷ್ಠಿಯಲ್ಲಿದ್ದ ಇತರ ಇಬ್ಬರು ನ್ಯಾಯಾಧೀಶರಾಗಿದ್ದರು.
ನ್ಯಾಯಾಂಗದ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಅಂದು ಇಂತಹ ಮನೋನಿಶ್ಚಯದ ಧೈರ್ಯವನ್ನು ಪ್ರದರ್ಶಿಸಿದ್ದ ನ್ಯಾ.ಗೊಗೊಯಿ ಅವರು ನ್ಯಾಯಾಂಗದ ಸ್ವಾತಂತ್ರ ಮತ್ತು ನಿಷ್ಪಕ್ಷಪಾತ ಕುರಿತು ಉದಾತ್ತ ನೀತಿಗಳೊಂದಿಗೆ ರಾಜಿಮಾಡಿಕೊಂಡು ರಾಜ್ಯಸಭಾ ಸದಸ್ಯತ್ವವನ್ನು ಒಪ್ಪಿಕೊಂಡಿರುವುದು ಅಚ್ಚರಿಯನ್ನುಂಟು ಮಾಡಿದೆ ಎಂದರು.
ನ್ಯಾಯಾಂಗದ ಸ್ವಾತಂತ್ರ್ಯದ ಮಹತ್ವಕ್ಕೆ ಒತ್ತು ನೀಡಿದ ನ್ಯಾ.ಜೋಸೆಫ್, ಮುಖ್ಯವಾಗಿ ಈ ನೀತಿಯಿಂದಾಗಿ ಮೂಲ ಸ್ವರೂಪಗಳು ಮತ್ತು ಸಾಂವಿಧಾನಿಕ ಮೌಲ್ಯಗಳ ದೃಢವಾದ ಬುನಾದಿಯ ಮೇಲೆ ನಮ್ಮ ಮಹಾನ್ ದೇಶವು ಮುಂದುವರಿದಿದೆ. ಜನರ ಈ ವಿಶ್ವಾಸ ಅಲುಗಾಡಿದ ಘಳಿಗೆಯಲ್ಲಿ,ನ್ಯಾಯಾಧೀಶರ ಒಂದು ವರ್ಗವು ತಾರತಮ್ಯದ ಧೋರಣೆಯನ್ನು ಹೊಂದಿದೆ ಎಂಬ ಭಾವನೆ ಮೂಡಿದ ಘಳಿಗೆಯಲ್ಲಿ ಭದ್ರವಾದ ಬುನಾದಿಯ ಮೇಲೆ ನಿರ್ಮಾಣಗೊಂಡಿರುವ ದೇಶದ ರಾಚನಿಕ ಜೋಡಣೆಯು ಶಿಥಿಲಗೊಳ್ಳುತ್ತದೆ ಎಂದರು.







