ಕೆ.ಸಿ.ವ್ಯಾಲಿ ಯೋಜನೆ: ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ 126 ಕೆರೆಗಳಿಗೆ ನೀರು- ಜೆ.ಸಿ.ಮಾಧುಸ್ವಾಮಿ

ಬೆಂಗಳೂರು, ಮಾ.17: ಬೆಂಗಳೂರು ನಗರದ ಕೆ.ಸಿ.ವ್ಯಾಲಿ ಮತ್ತು ಬೆಳ್ಳಂದೂರು ಸಂಸ್ಕರಣ ಘಟಕಗಳಿಂದ ಒಟ್ಟು 400 ಎಂಎಲ್‌ಡಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಏತ ನೀರಾವರಿ ಮೂಲಕ ಹಾಯಿಸಿ ಕೋಲಾರ ಜಿಲ್ಲೆಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಒಟ್ಟು 126 ಕೆರೆಗಳನ್ನು ತುಂಬಿಸಲು ಉದ್ದೇಶಿಸಲಾಗಿದೆ.
ಈ ಯೋಜನೆಯನ್ನು 2018ರ ಜೂ.2ರಂದು ಚಾಲನೆ ನೀಡಲಾಗಿದೆ. ಈವರೆಗೆ ಒಟ್ಟು 640 ದಿನಗಳಲ್ಲಿ 180 ದಿನಗಳು ನ್ಯಾಯಾಲಯದ ಕಲಾಪಗಳಿಂದ ಹಾಗೂ ಇತರ ಕಾರಣಗಳಿಂದ ನೀರನ್ನು ಹಾಯಿಸಲು ಸಾಧ್ಯವಾಗಿರಲಿಲ್ಲ. ಉಳಿದ 460 ದಿನಗಳಲ್ಲಿ 3.80 ಟಿಎಂಸಿ ನೀರನ್ನು 49 ಕೆರೆಗಳಿಗೆ ಮತ್ತು 93 ಚೆಕ್ ಡ್ಯಾಂಗಳಿಗೆ ತುಂಬಿಸಲಾಗಿದೆ ಹಾಗೂ ನಾಲ್ಕು ಕೆರೆಗಳಿಗೆ ನೀರು ಹರಿಸಲಾಗುತ್ತಿದೆ ಎಂದು ಅವರು ಹೇಳಿದರು.
ಈ ಯೋಜನೆಯಡಿಯಲ್ಲಿ ಶೇ.50ರಷ್ಟು ಕೆರೆಯನ್ನು ತುಂಬಿಸಲು ಯೋಜಿಸಲಾಗಿದೆ. ಆದರೆ, ಸ್ಥಳೀಯ ಮುಖಂಡರು ಹಾಗೂ ರೈತಾಪಿ ಜನರು ಕೆರೆಗಳಲ್ಲಿ ಶೇ.50ರಷ್ಟು ನೀರನ್ನು ತುಂಬಿಸಲು ವಿರೋಧಿಸಿ, ಇಲಾಖೆಯಿಂದ ನಿರ್ಮಿಸಿರುವ ಔಟ್‌ಲೆಟ್‌ಗಳನ್ನು ಮುಚ್ಚಿದ್ದಾರೆ ಎಂದು ಮಾಧುಸ್ವಾಮಿ ಹೇಳಿದರು.
ಈ ಬಗ್ಗೆ ಸ್ಥಳೀಯ ಮುಖಂಡರು ಹಾಗೂ ರೈತಾಪಿ ಜನರ ಜೊತೆ ಸಭೆ ನಡೆಸಿ ಈ ಕೆರೆಗಳ ಶೇ.50ರಷ್ಟು ತುಂಬಿಸಿ ಮುಂದಿನ ಕೆರೆಗೆ ನೀರು ಹರಿಸುವ ಬಗ್ಗೆ ಸಂಧಾನ ಮಾಡಲು ಸಾಕಷ್ಟು ಬಾರಿ ಪ್ರಯತ್ನ ಪಟ್ಟರೂ ಯಾವುದೇ ಸಂಧಾನ ಸಫಲವಾಗಿಲ್ಲ ಎಂದು ಅವರು ತಿಳಿಸಿದರು. ಈ ಯೋಜನೆಯಡಿ ಶೇ.70ರಷ್ಟು ಗುರುತ್ವಾಕರ್ಷಣ ಮೂಲಕ ನೀರನ್ನು ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಹರಿಯುತ್ತಿರುವುದರಿಂದ ಹಾಗೂ ಕಾಲುವೆ ಮತ್ತು ಕೆರೆಗಳಲ್ಲಿ ಯಥೇಚ್ಛವಾಗಿ ಮರಳುಗಾರಿಕೆ ಮಾಡಿರುವುದರಿಂದ ಕೆರೆಯ ನೀರು ಹಿಡಿತದ ಸಾಮರ್ಥ್ಯ ಕಡಿಮೆಯಾಗಿದೆ ಎಂದು ಅವರು ಹೇಳಿದರು.
20 ವರ್ಷಗಳ ನಂತರ ಕೆರೆಗಳು ತುಂಬುತ್ತಿರುವುದರಿಂದ ನೀರು ಇಂಗಿತ ಬಹಳಷ್ಟು ಹೆಚ್ಚಾಗಿದೆ. ಅಲ್ಲದೆ, ಬೇಸಿಗೆಯಲ್ಲಿ ನೀರು ಆವಿಯಾಗುವ ಪ್ರಮಾಣವು ಹೆಚ್ಚಾಗಿದೆ ಎಂದು ಮಾಧುಸ್ವಾಮಿ ಹೇಳಿದರು.
ಸಂಸ್ಕರಿಸಿದ ನೀರು ಒಂದು ಕೆರೆಯಿಂದ ಮತ್ತೊಂದು ಕೆರೆಗೆ ನೀರು ಹರಿಯುವ ಕಾಲುವೆಗಳಲ್ಲಿ ಹಾಗೂ ಕೆರೆಗಳ ಅಂಚಿನಲ್ಲಿ ಅನಧಿಕೃತವಾಗಿ ಪಂಪು ಮೋಟಾರುಗಳನ್ನು ಅಳವಡಿಸಿ, ಭೂಗತವಾಗಿ ಪೈಪ್‌ಗಳನ್ನು ಅಳವಡಿಸಿ, ಮರಳು ಕೊಳವೆ ಬಾವಿಗಳ ಮೂಲಕ ಹಾಗೂ ಮೂಲ ಕಾಲುವೆ ಪಕ್ಕದಲ್ಲಿಯೆ ಬದಲಿ ಕಾಲುವೆಗಳನ್ನು ನಿರ್ಮಿಸಿ ನೀರನ್ನು ಯಥೇಚ್ಛವಾಗಿ ಅನಧಿಕೃತವಾಗಿ ರೈತರು ತೆಗೆದುಕೊಳ್ಳುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕಾಲುವೆಗಳ ತಪಾಸಣೆಯ ಸಮಯದಲ್ಲಿ ಕಂಡು ಬಂದ ಇಂತಹ ಮೋಟಾರುಗಳನ್ನು ವಶಪಡಿಸಿಕೊಂಡು, ಸಂಬಂಧಪಟ್ಟ ರಾಜಸ್ವ ನಿರೀಕ್ಷಕರ ವಶಕ್ಕೆ ನೀಡಿ ಮುಂದಿನ ಕ್ರಮ ಕೈಗೊಳ್ಳಲು ಪತ್ರ ಬರೆಯಲಾಗಿದೆ. ಅಲ್ಲದೆ, ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೂ ಪತ್ರ ಬರೆಯಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.
ಕೆ.ಸಿ.ವ್ಯಾಲಿ ಮತ್ತು ಬೆಳ್ಳಂದೂರು ಸಂಸ್ಕರಣಾ ಘಟಕಗಳಿಂದ ಒಟ್ಟಾರೆಯಾಗಿ ಪ್ರತಿದಿನ ಸರಾಸರಿ 260 ರಿಂದ 270 ಎಂಎಲ್‌ಡಿಯಷ್ಟು ಸಂಸ್ಕರಿಸಿದ ನೀರನ್ನು ಸ್ವೀಕರಿಸಲಾಗುತ್ತಿದ್ದು, ನಿಗದಿತ ಪ್ರಮಾಣದ 400 ಎಂಎಲ್‌ಡಿಗೆ 130 ರಿಂದ 140 ಎಂಎಲ್‌ಡಿ ನೀರು ನೀಡಬೇಕಾಗಿದೆ ಎಂದು ಅವರು ತಿಳಿಸಿದರು.
ಕೆ.ಸಿ.ವ್ಯಾಲಿ ಯೋಜನೆಯಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ನೀರನ್ನು ತುಂಬಿಸಿ ಅಂತರ್ಜಲ ಅಭಿವೃದ್ಧಿಪಡಿಸಲು ಸಂಸ್ಕರಿಸಿದ ನೀರನ್ನು ಹಾಯಿಸುತ್ತಿದ್ದು, ಅನಧಿಕೃತವಾಗಿ ಈ ನೀರಿನ ಬಳಕೆ ತಡೆಗಟ್ಟಲು ನಿವೃತ್ತ ಸೈನಿಕರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಮಾಧುಸ್ವಾಮಿ ಹೇಳಿದರು.







