ಹೊಸ ಮರಳು ನೀತಿ ಜಾರಿಗೆ ಕ್ರಮ: ಸಚಿವ ಸಿ.ಸಿ.ಪಾಟೀಲ್

ಬೆಂಗಳೂರು, ಮಾ.17: ರಾಜ್ಯದಲ್ಲಿನ ನಿರ್ಮಾಣ ಕಾಮಗಾರಿಗಳಿಗೆ ಕೈಗೆಟಕುವ ದರದಲ್ಲಿ ಮತ್ತು ನಿಯಮಿತವಾಗಿ ಮರಳು ದೊರಕುವಂತೆ ಮಾಡಲು ಹೊಸ ಮರಳು ನೀತಿ ಜಾರಿಗೆ ತರಲು ಕ್ರಮ ಕೈಗೊಳ್ಳಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರ ಮೇರೆಗೆ ಚಿತ್ರದರ್ಗು ಜಿಲ್ಲೆಯ ಹೊಸದುರ್ಗ ತಾಲೂಕಿನಲ್ಲಿ ಕೆರೆ ಕುಂಟೆಗಳಲ್ಲಿ ಮರಳು ಮಿಶ್ರಿತ ಮಣ್ಣನ್ನು ಉಪಯೋಗಿಸಲು, ಸಾಗಾಣಿಕೆ ಮಾಡಲು ಅವಕಾಶ ಕಲ್ಪಿಸುವ ಬಗ್ಗೆ ಹಾಗೂ ಕೂಲಿ ಕಾರ್ಮಿಕರ ಮೇಲೆ ನಡೆಯುತ್ತಿರುವ ಪೊಲೀಸ್ ದೌರ್ಜನ್ಯದ ಬಗ್ಗೆ ನಡೆದ ಚರ್ಚೆಗೆ ಅವರು ಉತ್ತರಿಸಿದರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಸಣ್ಣ ಹಳ್ಳ, ತೊರೆ, ಕೆರೆಗಳಲ್ಲಿನ ಲಭ್ಯವಿರುವ ಮರಳನ್ನು ಸದರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವಂತ ಮನೆ ನಿರ್ಮಾಣ, ಶೌಚಾಲಯ ನಿರ್ಮಾಣ ಮತ್ತು ಇತರೆ ಸಮುದಾಯ ಭಾಗಿತ್ವ ಯೋಜನೆಗಳಿಗೆ ಉಪಯೋಗಿಸಿಕೊಳ್ಳಲು ಹಾಗೂ ಮರಳನ್ನು ಟ್ರಾಕ್ಟರ್, ಎತ್ತಿನಗಾಡಿ, ಲಘು ವಾಹನಗಳಲ್ಲಿ ಮಾತ್ರ ಸಾಗಾಣಿಕೆಯನ್ನು ಮಾಡಲು ಅವಕಾಶ ಕಲ್ಪಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.
ಹೂಳು ತೆಗೆಯುವ ಕಾರ್ಯಕ್ಕೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅನುಮತಿ ಪಡೆಯುವ ಅಗತ್ಯತೆ ಇಲ್ಲ. ಆದರೆ, ಕೆರೆಯ ಹೂಳಿನಲ್ಲಿ ಮರಳಿದ್ದಲ್ಲಿ, ಆ ಮರಳನ್ನು ತೆಗೆಯುವುದಕ್ಕೆ ನಿಯಮಾವಳಿಗಳಲ್ಲಿ ಅವಕಾಶವಿಲ್ಲ ಎಂದು ಸಿ.ಸಿ.ಪಾಟೀಲ್ ತಿಳಿಸಿದರು.
2016-17ನೆ ಸಾಲಿನಿಂದ 2019-20ನೆ ಸಾಲಿನ ಜನವರಿ 2020ರ ಅಂತ್ಯದವರೆಗೆ ಹೊಸದುರ್ಗ ತಾಲೂಕು ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯ ಒಟ್ಟು 242 ಪ್ರಕರಣಗಳನ್ನು ದಾಖಲಿಸಲಾಗಿದೆ ಮತ್ತು 88 ಪ್ರಕರಣಗಳಿಂದ ಒಟ್ಟು 11.44 ಲಕ್ಷ ರೂ.ದಂಡ ವಸೂಲಿ ಮಾಡಲಾಗಿದೆ ಎಂದು ಅವರು ಹೇಳಿದರು.
ಹರಾಜು ಮೂಲಕ 237 ಮರಳು ಗುತ್ತಿಗೆ ಮಂಜೂರಾಗಿವೆ. ಸರಕಾರಿ ಕಾಮಗಾರಿಗಳಿಗೆ 18 ಮರಳ ಬ್ಲಾಕ್‌ಗಳನ್ನು ಮೀಸಲಿರಿಸಲಾಗಿದೆ. ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆಗಾಗಿ 44 ಪರವಾನಗಿಗಳನ್ನು ಮಂಜೂರು ಮಾಡಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಸಿ.ಸಿ.ಪಾಟೀಲ್ ತಿಳಿಸಿದರು.







